ಮಂಡ್ಯ: ಇಬ್ಬರು ಯುವಕರ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿರುವ ದುಷ್ಕರ್ಮಿಗಳ ಗುಂಪೊಂದು ಓರ್ವನನ್ನು ಕೊಲೆಗೈದು, ಮತ್ತೊಬ್ಬನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಂತ (28) ಹತ್ಯೆಗೀಡಾದ ಯುವಕ. ತೀವ್ರವಾಗಿ ಗಾಯಗೊಂಡಿರುವ ಕುಮಾರ ಅಲಿಯಾಸ್ ಕುಮ್ಮಿ ಎಂಬಾತನನ್ನು ಸಾತನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ರಾತ್ರಿ 9 ಗಂಟೆಯ ಸುಮಾರಿಗೆ ಮಳೆಯಿಂದಾಗಿ ಮನೆ ಮುಂದೆ ಕುಳಿತಿದ್ದ ಕಾಂತ ಹಾಗೂ ಕುಮಾರನ ಮೇಲೆ ಏಕಾಏಕಿ ದಾಳಿ ಮಾಡಿರುವ 3-4 ಮೂವರು ಯುವಕರ ಗುಂಪು, ಮಚ್ಚು ಹಾಗು ಲಾಂಗ್ಗಳಿಂದ ಕೊಚ್ಚಿ ಕಾಂತನನ್ನು ಕೊಲೆಗೈದಿದ್ದಾರೆ. ನಂತರ ಕುಮಾರನ ಮೇಲೂ ದಾಳಿ ನಡೆಸಿದ್ದು, ಆತ ತಪ್ಪಿಸಿಕೊಂಡು ಮನೆಯೊಂದನ್ನು ಸೇರಿಕೊಂಡು ಪಾರಾಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.