ಕರ್ನಾಟಕ

karnataka

ETV Bharat / state

ಬೆಂಗಳೂರು ಅಭಿವೃದ್ಧಿಗೆ ಮೋದಿ ಸರ್ಕಾರದಿಂದ ₹1.30 ಲಕ್ಷ ಕೋಟಿ ಅನುದಾನ ಬಳಕೆ: ತೇಜಸ್ವಿ ಸೂರ್ಯ - Tejasvi Surya - TEJASVI SURYA

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಇಬ್ಬಲೂರಿನ ಸನ್‌ ಸಿಟಿ ಅಪಾರ್ಟ್‌ಮೆಂಟ್‌ ನಿವಾಸಿಗಳೊಂದಿಗೆ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಸಂವಾದ ನಡೆಸಿದರು.

Tejaswi Surya spoke.
ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವೀ ಸೂರ್ಯ ಸಂವಾದದಲ್ಲಿ ಮಾತನಾಡಿದರು.

By ETV Bharat Karnataka Team

Published : Apr 8, 2024, 10:02 PM IST

ಬೆಂಗಳೂರು:ಕೇವಲ ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ 1.30 ಲಕ್ಷ ಕೋಟಿ ರೂ. ಅನುದಾನ ಒದಗಿಸುವ ಮೂಲಕ ನಗರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಇಬ್ಬಲೂರಿನ ಸನ್‌ ಸಿಟಿ ಅಪಾರ್ಟ್‌ಮೆಂಟ್‌ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಅವರು, ಕಳೆದ ಐದು ವರ್ಷದಲ್ಲಿ ಕೇಂದ್ರ ಸರ್ಕಾರದ ಅನೇಕ ಪ್ರಮುಖ ಯೋಜನೆಗಳು ಬೆಂಗಳೂರಿನಲ್ಲಿ ಜಾರಿಗೊಂಡಿವೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೆಟ್ರೋ ಮಾರ್ಗಗಳ ವಿಸ್ತರಣೆ, ಸಬ್‌ ಅರ್ಬನ್‌ ರೈಲು ಯೋಜನೆ, ಉಪನಗರ ವರ್ತುಲ ರಸ್ತೆ ಯೋಜನೆಗಳಿಗೆ ಕೇಂದ್ರದಿಂದ ಮಂಜೂರಾತಿ ದೊರೆತಿದೆ. ಬಿಎಂಟಿಸಿಗೆ 1,600 ಇಲೆಕ್ಟ್ರಿಕ್ ಬಸ್​​ಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ.

ಎನ್‌ಐಎ ಘಟಕ, ಅಮೆರಿಕ ಧೂತವಾಸ ಕಚೇರಿ:ಭಯೋತ್ಪಾದನಾ ಚಟುವಟಿಕೆಗಳಿಗೆ ನಿಯಂತ್ರಣ ಹೇರಲು ಕೇಂದ್ರದ ಮೇಲೆ ಒತ್ತಡ ಹೇರಿ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್‌ಐಎ ಘಟಕವನ್ನು ನಗರಕ್ಕೆ ತರಲಾಗಿದೆ. ಇದೀಗ ರಾಮೇಶ್ವರಂ ಕೆಫೆ ಸ್ಫೋಟ ಘಟನೆ ತನಿಖೆ ಎನ್​​ಐಎಯಿಂದ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಾಲದಿಂದಲೂ ಬಾಕಿ ಉಳಿದಿದ್ದ ಅಮೆರಿಕ ಧೂತವಾಸ ಕಚೇರಿ ತಮ್ಮ ಅವಧಿಯಲ್ಲಿ ತೆರೆದಿದ್ದು ವಿಶೇಷ ಎಂದು ಹೇಳಿದರು.

ಕೋವಿಡ್‌ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ತಾವು ಹಾಗೂ ತಮ್ಮ ಕಚೇರಿಯ ಕಾರ್ಯ ನಿರ್ವಹಣೆ ಕುರಿತು ಇದೇ ಸಂದರ್ಭದಲ್ಲಿ ವಿವರಿಸಿದ ಅವರು, ಬೆಡ್‌ ಬುಕಿಂಗ್‌ ಪದ್ಧತಿಯಲ್ಲಿದ್ದ ಅಕ್ರಮಗಳನ್ನು ಬಯಲಿಗೆಳೆದು ವೈಪರೀತ್ಯಗಳನ್ನು ಸರಿಪಡಿಸಿದ ನಂತರ 4 ಸಾವಿರಕ್ಕೂ ಅಧಿಕ ಹಾಸಿಗೆಗಳು ಸೋಂಕಿತರಿಗೆ ಲಭ್ಯವಾದವು. ದೇಶದಲ್ಲೇ ಅತಿ ದೊಡ್ಡ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಬ್ಯಾಂಕ್‌ ಸ್ಥಾಪಿಸುವ ಮೂಲಕ ನೂರಾರು ಜನರ ಜೀವ ಉಳಿದಿದೆ. ನಿಷ್ಕ್ರಿಯಗೊಂಡಿದ್ದ ನಾಲ್ಕು ಆಸ್ಪತ್ರೆಗಳನ್ನು ಮರು ನವೀಕರಣಗೊಳಿಸಿ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿ 350 ಐಸಿಯು ಹೆಚ್ಚುವರಿ ಬೆಡ್‌ ಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್‌ ಲಾಕ್‌ ಡೌನ್‌ನ ಸಂದರ್ಭದಲ್ಲಿ ಸಾರ್ವಜನಿಕರ ಅಗತ್ಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಎಂ.ಪಿ.ಕೋವಿಡ್‌ ಟಾಸ್ಕ್‌ ಫೋರ್ಸ್ ರಚಿಸಲಾಯಿತು. ಕ್ಷೇತ್ರದಲ್ಲಿ ಅತಿದೊಡ್ಡ ಲಸಿಕೆ ಅಭಿಯಾನ ನಡೆಸಲಾಯಿತು. ಇದರಿಂದ ಸುಮಾರು 28 ಲಕ್ಷ ನಾಗರಿಕರು ತ್ವರಿತವಾಗಿ ಲಸಿಕೆ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.

ಕ್ಷೇತ್ರದಲ್ಲಿ ಆರೋಗ್ಯ ರಕ್ಷಣೆಗೆ ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ಅವರು, ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿರುವ ನಾಗರಿಕರಿಗೆ ಉಚಿತ ಔಷಧಗಳನ್ನು ಒದಗಿಸುವ ಸಲುವಾಗಿ ನಮೋ ಆರೋಗ್ಯ ನಿಧಿ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿ 1,000ಕ್ಕೂ ಅಧಿಕ ಹಿರಿಯರಿಗೆ ಪ್ರತಿ ತಿಂಗಳು ಔಷಧ ನೀಡಲಾಗುತ್ತಿದೆ. ದಕ್ಷಿಣ ಕ್ಷೇತ್ರದಲ್ಲಿ 5 ವರ್ಷಗಳ ಹಿಂದೆ 14 ರಷ್ಟಿದ್ದ ಜನೌಷಧಿ ಕೇಂದ್ರಗಳ ಸಂಖ್ಯೆ ಇದೀಗ 120ಕ್ಕೆ ಏರಿದ್ದು, ಇಡೀ ದೇಶದಲ್ಲೇ ಅತಿಹೆಚ್ಚು ಜನೌಷಧಿ ಕೇಂದ್ರಗಳನ್ನು ಹೊಂದಿರುವ ಕ್ಷೇತ್ರವೆನಿಸಿದೆ. ಕ್ಷೇತ್ರದ ಜನರು ತಮ್ಮನ್ನು ಮನೆ ಮಗನಂತೆ ಸ್ವೀಕರಿಸಿದ್ದು, ಮತ್ತೊಮ್ಮೆ ಆಶೀರ್ವಾದಿಸುವ ವಿಶ್ವಾಸವಿದೆ ಎಂದು ತೇಜಸ್ವೀ ಸೂರ್ಯ ಹೇಳಿದರು.

ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಸನ್‌ ಸಿಟಿ ಅಪಾರ್ಟ್‌ ಮೆಂಟ್‌ನ ಪ್ರಸಾದ್‌ ಜೋಶಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂಓದಿ:ಬರ ಪರಿಹಾರ ವಿಚಾರವಾಗಿ ಸುಪ್ರೀಂ ಕೋರ್ಟ್​ಗೆ ತಪ್ಪು‌ ಮಾಹಿತಿ ನೀಡಿ ದಾರಿ ತಪ್ಪಿಸುವ ಯತ್ನ: ಸಿದ್ದರಾಮಯ್ಯ - Siddaramaiah

ABOUT THE AUTHOR

...view details