Test Match Completed in 10 balls: ಟೆಸ್ಟ್ ಎಂಬುದು ದೀರ್ಘ ಸ್ವರೂಪದ ಪಂದ್ಯವಾಗಿದೆ. ಇದು ಆಟಗಾರನ ತಾಳ್ಮೆ ಮತ್ತು ಕೌಶಲ್ಯಗಳನ್ನು ಪರೀಕ್ಷಿಸುತ್ತದೆ. 1877ರಲ್ಲಿ ಆರಂಭವಾದ ಟೆಸ್ಟ್ ಪಂದ್ಯ 147 ವರ್ಷಗಳು ಕಳೆದರು ಅದರ ಮೇಲಿನ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಹಾಗಾಗಿ ಅತ್ಯಂತ ಹಳೆಯ ಮತ್ತು ಶ್ರೇಷ್ಠ ಸ್ವರೂಪದ ಕ್ರಿಕೆಟ್ ಎಂದೇ ಖ್ಯಾತಿ ಪಡೆದಿದೆ. ಆದರೆ ನಿಮಗೆ ಗೊತ್ತಾ 5 ದಿನ ನಡೆಯಬೇಕಾದ ಟೆಸ್ಟ್ ಪಂದ್ಯವೊಂದು ಕೇವಲ 10 ಎಸೆತಗಳಲ್ಲಿ ಮುಗಿದಿದ್ದು. ಇದು ನಂಬಲು ಅಸಾಧ್ಯವೆನಿಸಿದರೂ ಇತಿಹಾಸದಲ್ಲಿ ನಡೆದಿರುವ ನೈಜ ಘಟನೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ 5 ಬಾರಿ ಸಂಭವಿಸಿದೆ. ಅದರ ಬಗ್ಗೆ ತಿಳಿಯೋಣ..
10 ಎಸೆತಗಳಲ್ಲಿ ಟೆಸ್ಟ್ ಮುಕ್ತಾಯ:ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಟೆಸ್ಟ್ ಪಂದ್ಯ ಮುಗಿದಿರುವ ದಾಖಲೆ ಇದೆ. 2009 ಫೆಬ್ರವರಿ 13ರಂದು ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ಸರ್ ವಿವಿಯನ್ ರಿಚರ್ಡ್ಸನ್ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆದಿತ್ತು. ಈ ಪಂದ್ಯ ಆರಂಭವಾಗಿ 10 ಎಸೆತಗಳಲ್ಲಿ ಅಂದರೆ 1.4 ಓವರ್ಗಳಲ್ಲಿ ಮುಕ್ತಾಯಗೊಂಡಿತ್ತು. ವಾಸ್ತವವಾಗಿ ಈ ಮೈದಾನದ ಪಿಚ್ ಅನ್ನು ಹೊಸದಾಗಿ ತಯಾರಿಸಲಾಗಿತ್ತು. ಇದರಿಂದಾಗಿ ಸರಿಯಾದ ಬೌಲಿಂಗ್ ಮಾಡಲು ಆಗಿರಲಿಲ್ಲ. ಅಲ್ಲದೇ ಬೌಲರ್ಗಳ ಕಾಲು ಸಹ ಪಿಚ್‌ನಲ್ಲಿ ಸಿಲುಕಿಕೊಳ್ಳುತ್ತಿದ್ದ ಕಾರಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಕಳಪೆ ಪಿಚ್ನಿಂದಾಗಿ ಪಂದ್ಯವನ್ನು ರದ್ದುಗೊಳಿಸಿ ಡ್ರಾ ಎಂದು ಘೋಷಿಸಲಾಯಿತು.
61 ಎಸೆತಗಳಲ್ಲಿ ಪಂದ್ಯ ಫಿನಿಶ್:ಟೆಸ್ಟ್ ಇತಿಹಾಸದಲ್ಲಿ ಎರಡನೇ ಅತಿ ಕಡಿಮೆ ಅವಧಿಯ ಟೆಸ್ಟ್ ಪಂದ್ಯ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ಜನವರಿ 1998ರಲ್ಲಿ ನಡೆದಿತ್ತು. ಈ ಪಂದ್ಯದ ಫಲಿತಾಂಶ ಕೂಡ ಡ್ರಾ ಆಗಿತ್ತು. ಕಿಂಗ್ಸ್ಟನ್ನಲ್ಲಿ ನಡೆದಿದ್ದ ಈ ಪಂದ್ಯ ಕೇವಲ 61 ಎಸೆತಗಳಲ್ಲಿ ಮುಕ್ತಾಯಗೊಂಡಿತ್ತು. ವಾಸ್ತವವಾಗಿ, ಆಟಗಾರರ ಜೀವ ಉಳಿಸಲು ಅಂಪೈರ್‌ಗಳು ಈ ಪಂದ್ಯವನ್ನು ನಿಲ್ಲಿಸಿದ್ದರು. ಈ ಪಿಚ್‌ನಲ್ಲಿ ಚೆಂಡು ಭಾರೀ ಬೌನ್ಸರ್ ಆಗುತ್ತಿದ್ದ ಕಾರಣ ಬ್ಯಾಟರ್ಗಳು ಗಾಯಗೊಂಡಿದ್ದರು. ನಂತರ ಪಿಚ್ ಅಪಾಯಕಾರಿ ಎಂದು ಪರಿಗಣಿಸಿ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಲಾಗಿತ್ತು.