ಸೇಂಟ್ ಲೂಸಿಯಾ:ವೆಸ್ಟ್ ಇಂಡೀಸ್ನ ಸೇಂಟ್ ಲೂಸಿಯಾ ಕ್ರೀಡಾಂಗಣದಲ್ಲಿ ಮಳೆ ಅಡ್ಡಿ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಇಂದಿನ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ. ಇದಕ್ಕೆ ಕಾರಣ ಮೈದಾನದಲ್ಲಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ. ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಪೇರಿಸಿದ್ದು, ಆಸೀಸ್ ಗೆಲ್ಲಲು 206 ರನ್ ಬೇಕಿದೆ.
ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಟಿಕೆಟ್ ಖಾತ್ರಿಗಾಗಿ ನಡೆಯುತ್ತಿರುವ ಪಂದ್ಯದಲ್ಲಿ ಹಿಟ್ಮ್ಯಾನ್ ರೋಷಾವೇಷದಿಂದ ಬ್ಯಾಟ್ ಬೀಸಿದರು. ಮೊದಲ ಓವರ್ನಿಂದಲೇ ದಂಡನೆ ಶುರುವಿಟ್ಟುಕೊಂಡ ರೋಹಿತ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಭಾರತದ ಪರ ಟಿ20ಯಲ್ಲಿ ಬಂದ ಐದನೇ ಅತಿವೇಗದ ಫಿಫ್ಟಿಯಾಗಿದೆ. ಜೊತೆಗೆ ರೋಹಿತ್ರ ವೈಯಕ್ತಿಕ ವೇಗದ ದಾಖಲೆಯೂ ಇದಾಗಿದೆ.
ಈ ಟಿ20 ವಿಶ್ವಕಪ್ ಎರಡನೇ ಬಾರಿಗೆ ವಿರಾಟ್ ಕೊಹ್ಲಿ ಸೊನ್ನೆಗೆ ಔಟಾದರು. ಆದರೂ, ಯಾವುದೇ ಭೀತಿಯಿಲ್ಲದೇ ಬ್ಯಾಟ್ ಬೀಸಿದ ಹಿಟ್ಮ್ಯಾನ್ ನೋಡನೋಡುತ್ತಿದ್ದಂತೆ ಐದನೇ ಓವರ್ನಲ್ಲಿಯೇ ಅರ್ಧಶತಕ ಬಾರಿಸಿದರು. ಆಸೀಸ್ನ ಪ್ರತಿ ಬೌಲರ್ಗೂ ದಂಡನೆಯ ಶಿಕ್ಷೆ ವಿಧಿಸಿದ ಭಾರತದ ನಾಯಕ ಸರಾಸರಿ ಓವರ್ಗೆ 15 ರನ್ ಚಚ್ಚಿದರು. ಮಿಚೆಲ್ ಸ್ಟಾರ್ಕ್ ಎಸೆದ ಮೂರನೇ ಓವರ್ನಲ್ಲಿ 6, 6, 4, 6, 0, Wd, 6 ಸಮೇತ 29 ರನ್ ಸಿಡಿಸಿದರು.