ಬೆಂಗಳೂರು : ಜಗದೋದ್ಧಾರಕನಿಗೆ ಇಂದು ಜನುಮ ದಿನವಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದಲ್ಲಿ, ಗೋಕುಲಾಷ್ಟಮಿಯನ್ನ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಲಂಕಾರಪ್ರಿಯ ಕೃಷ್ಣನನ್ನು ನೋಡಲು ನಗರದ ಇಸ್ಕಾನ್ ದೇವಾಲಯದಲ್ಲಿ ಜನಸಾಗರವೇ ಹರಿದುಬರುತ್ತಿದೆ. ಕಲರ್ ಕಲರ್ ಲೈಟಿಂಗ್ಸ್, ಹೂವಿನ ತೋರಣ, ಕೈಯಲ್ಲಿ ಕೊಳಲು, ರೇಷ್ಮೆವಸ್ತ್ರ, ಮಿನುಗುವ ಆಭರಣಗಳನ್ನ ತೊಟ್ಟು ಇಸ್ಕಾನ್ನಲ್ಲಿ ಶ್ರೀ ಕೃಷ್ಣ ಕಂಗೊಳಿಸುತ್ತಿದ್ದಾನೆ. ಇನ್ನೊಂದೆಡೆ ಭಕ್ತಿ ಭಾವದಲ್ಲಿ ಭಕ್ತ ಸಾಗರ ಲೀನವಾಗಿದೆ.
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದ ದಿನವೆಂದು ಎಲ್ಲೆಡೆ ಆ ಗೋಪಿಲೋಲನ ಆರಾಧನೆಯನ್ನು ಮಾಡಲಾಗುತ್ತದೆ. ಕಷ್ಟ ಕಾರ್ಪಣ್ಯದಿಂದ ಕಾಪಾಡಿ ಸಂತಸ ನೀಡಲಿ ಎಂದು ಭಕ್ತರು ಕೃಷ್ಣನನ್ನು ಪೂಜಿಸುತ್ತಿದ್ದಾರೆ. ಈ ಹಿನ್ನಲೆ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಗರದ ಇಸ್ಕಾನ್ ದೇಗುಲದಲ್ಲಿ ನೀಲ ಮೇಘಶಾಮನಿಗೆ ವಿಶೇಷ ಪೂಜೆ ಮತ್ತು ಅಲಂಕಾರವನ್ನ ಮಾಡಲಾಗಿದೆ. ಇನ್ನೂ ಹಲವು ಕೃಷ್ಣ ದೇಗುಲಗಳಲ್ಲಿ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ.
ಇಸ್ಕಾನ್ ದೇವಸ್ಥಾನವಂತೂ ಸಂಪೂರ್ಣ ವಿವಿಧ ಹೂವುಗಳಿಂದ ಅಲಂಕಾರವಾಗಿದ್ದು, ಕೃಷ್ಣನಿಗೆ ಭೋಗ, ಪುಷ್ಪಾಂಜಲಿ ಸೇವೆ, ಪಲ್ಲಕ್ಕಿ ಉತ್ಸವ ಮತ್ತು ಜೂಲನ್ ಸೇವೆ ಕೂಡ ನೆರವೇರಿಸಲಾಯಿತು. ಅಲ್ಲದೇ 108 ತರಹದ ಪ್ರಸಾದದ ವಿಶೇಷ ನೈವೇದ್ಯ ಮಾಡಲಾಯಿತು. ಇಂದು ಹೆಚ್ಚಿನ ಭಕ್ತರು ಬರುವ ಹಿನ್ನೆಲೆ ಹೆಚ್ಚಿನ ಪೊಲೀಸ್ ಭದ್ರತೆ ಕೂಡ ಆಯೋಜನೆ ಮಾಡಲಾಗಿದೆ. 1500 ಸ್ವಯಂ ಸೇವಕರು ಸೇವೆಯಲ್ಲಿ ನಿರತರಾಗಿದ್ದಾರೆ. ಪಂಚಾಭಿಷೇಕ, ನರಸಿಂಹ ಹೋಮ, ಗುರು ಪೂಜೆ, ಶ್ರೀನಿವಾಸ ದರ್ಶನ ಜೊತೆಗೆ ಕೃಷ್ಣನ ಲೀಲೆಗಳನ್ನು ಒಳಗೊಂಡ ಭಜನೆ ಮಾಡಲಾಗುತ್ತಿದೆ.