ಗಣೇಶ ಚತುರ್ಥಿ ಹಿಂದೂಗಳು ಆಚರಿಸುವ ದೊಡ್ಡ ಹಬ್ಬ. ಈ ಹಬ್ಬವು ಭಾದ್ರಪದ ಮಾಸದ ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ ಅನಂತ ಚತುರ್ದಶಿ ತಿಥಿಯವರೆಗೆ ನಡೆಯುತ್ತದೆ. ಒಂಬತ್ತು ದಿನಗಳ ಭವ್ಯವಾದ ಗಣೇಶ ಹಬ್ಬದ ವಿವಿಧ ಆಚರಣೆಗಳ ಬಳಿಕ 10ನೇ ದಿನ ನಿಮಜ್ಜನದೊಂದಿಗೆ ಕೊನೆಗೊಳ್ಳುತ್ತದೆ. ಗಣೇಶ ಪ್ರತಿಷ್ಟಾಪನೆ ಆದ ಬಳಿಕ ಕೆಲವು ಕಡೆ ಅಂದೇ ಸಂಜೆ ನಿಜ್ಜನಗೊಳಿಸುತ್ತಾರೆ. ಮತ್ತೆ ಕೆಲವು ಕಡೆ 3, 5, 7 9 10, 13 ಹೀಗೆ ಅವರವರ ಸ್ಥಳೀಯ ಆಚರಣಾ ಸಂಪ್ರದಾಯದ ಪ್ರಕಾರ ನಿಮಜ್ಜನ ಮಾಡುತ್ತಾರೆ. ಇದೇನೇ ಇರಲಿ ವಿನಾಯಕ ಚೌತಿಯನ್ನು ಯಾವ ದಿನ ಆಚರಿಸಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಒಂದಷ್ಟು ಸಂದೇಹಗಳಿವೆ. ಈ ಹಿನ್ನೆಲೆಯಲ್ಲಿ ಪಂಚಾಂಗಗಳು ಏನು ಹೇಳುತ್ತಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ವಿನಾಯಕ ಚೌತಿ ಯಾವಾಗ?: ಪಂಚಾಂಗದ ಪ್ರಕಾರ, ಚತುರ್ಥಿ ತಿಥಿ ಸೆಪ್ಟೆಂಬರ್ 6ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 7, 2024 ರಂದು ಶನಿವಾರ ಸಂಜೆ 5:35 ರವರೆಗೆ ಮುಂದುವರಿಯುತ್ತದೆ. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದ ಪ್ರಕಾರ ಸೂರ್ಯೋದಯದ ತಿಥಿಯ ದಿನದಂದೇ ಹಬ್ಬವನ್ನು ಆಚರಿಸುವುದು ವಾಡಿಕೆ. ಅದಕ್ಕಾಗಿಯೇ ಜ್ಯೋತಿಷಿಗಳು ವಿನಾಯಕ ಚೌತಿಯನ್ನು ಸೆಪ್ಟೆಂಬರ್ 7 ರಂದು ಆಚರಿಸಬೇಕು ಎಂದು ಸೂಚಿಸುತ್ತಾರೆ.
ಗಣೇಶ ಪೂಜೆಗೆ ಶುಭ ಮುಹೂರ್ತ, ಪಂಚಾಂಗ ಮತ್ತು ಜ್ಯೋತಿಷಿಗಳು ಸೂಚಿಸಿದಂತೆ ವಿನಾಯಕ ಪೂಜೆಗೆ ಸೆಪ್ಟೆಂಬರ್ 7 ರಂದು 1:03 AM ನಿಂದ 01:34 PM ವರೆಗೆ ಶುಭ ಸಮಯವಾಗಿದ್ದು, ಈ ಸಂದರ್ಭದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿ ಪ್ರಾರ್ಥನೆ ಸಲ್ಲಿಸಿದರೆ ಒಳ್ಳೆಯದು ಎಂದು ಸೂಚಿಸಿದ್ದಾರೆ. ಈ ಸಮಯದಲ್ಲಿ ಹಬ್ಬದ ಆಚರಣೆ ಅಂದರೆ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಉತ್ತಮ ಎಂದು ಹೇಳಿದ್ದಾರೆ.
ಭಾದ್ರಪದ ಶುದ್ಧ ಚೌತಿ ದಿನವೇ ಶಿವನು ವಿನಾಯಕನಿಗೆ ಗಣಾಧಿಪತನವನ್ನು ವರ್ಗಾಯಿಸಿದ್ದೇಕೆ?: ಪರಮೇಶ್ವರ ವಿನಾಯಕನಿಗೆ ಭಾದ್ರಪದ ಶುದ್ಧ ಚೌತಿ ದಿನವೇ ಗಣಾಧಿಪತವನ್ನ ವರ್ಗಾಯಿಸಿದ ಎಂಬ ನಂಬಿಕೆ ಇದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ಅಡೆತಡೆಗಳು ಬರಬಾರದು ಎಂಬ ಹಾರೈಕೆಯಿಂದ ಈ ದಿನದಂದು ಗಣಪತಿಯನ್ನು ಪೂಜಿಸುತ್ತಾರೆ.