ಟೆಲ್ ಅವಿವ್(ಇಸ್ರೇಲ್):ಗುರುವಾರ ತಡರಾತ್ರಿ ಲೆಬನಾನ್‌ನಿಂದ ಇಸ್ರೇಲ್ ಪ್ರದೇಶದ ಕಡೆಗೆ ಡಜನ್ಗಟ್ಟಲೆ ರಾಕೆಟ್‌ಗಳನ್ನು ಹಾರಿಸಲಾಗಿದೆ ಎಂದು ಅಧಿಕೃತ ಸುದ್ದಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಲೆಬನಾನ್‌ನಿಂದ ಉಡಾಯಿಸಲಾದ ರಾಕೆಟ್‌ಗಳಲ್ಲಿ ಐದು ಮಾತ್ರ ಇಸ್ರೇಲ್ ಒಳಗೆ ಪ್ರವೇಶಿಸಿವೆ ಮತ್ತು ಯಾವುದೇ ಗಾಯ ಅಥವಾ ಪ್ರಾಣಹಾನಿ ಆದ ಬಗ್ಗೆ ವರದಿಗಳಾಗಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.
ಬೈರುತ್‌ನಲ್ಲಿ ಹಮಾಸ್ ಭಯೋತ್ಪಾದಕ ಗುಂಪಿನ ಸೇನಾ ಮುಖ್ಯಸ್ಥನನ್ನು ಕೊಂದ ನಂತರದ 48 ಗಂಟೆಗಳಲ್ಲಿ ಸೇಡು ತೀರಿಸಿಕೊಳ್ಳಲು ಪಶ್ಚಿಮ ಗಲಿಲಿಯಲ್ಲಿ ನಡೆಸಿರುವ ರಾಕೆಟ್ ದಾಳಿಯ ಹೊಣೆಯನ್ನು ಹೆಜ್ಬೊಲ್ಲಾ ವಹಿಸಿಕೊಂಡಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇಂದು ಮುಂಜಾನೆ (ನಿನ್ನೆ) ಲೆಬನಾನಿನ ಚಮಾ ಗ್ರಾಮದಲ್ಲಿನ ಇಸ್ರೇಲಿ ದಾಳಿಗೆ ಪ್ರತಿಕ್ರಿಯೆಯಾಗಿ ಮೆಟ್ಜುಬಾದ ಉತ್ತರ ಗಡಿ ಸಮುದಾಯದ ಮೇಲೆ ಡಜನ್ಗಟ್ಟಲೆ ರಾಕೆಟ್‌ಗಳನ್ನು ಉಡಾಯಿಸಿರುವುದಾಗಿ ಹೆಜ್ಬೊಲ್ಲಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಚಮಾದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸಿರಿಯನ್ನರು ಸಾವನ್ನಪ್ಪಿದ್ದಾರೆ. ಮತ್ತು ಹಲವಾರು ಲೆಬನಾನಿನ ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್‌ನ ಯೇಟರ್‌ನಲ್ಲಿ ಹೆಜ್ಬೊಲ್ಲಾ ರಾಕೆಟ್ ಲಾಂಚರ್ನ್ನು ಹೊಡೆದು ಉರುಳಿಸಿವೆ. ಇಸ್ರೇಲ್ ರಕ್ಷಣಾ ಪಡೆಯ ಪ್ರಕಾರ, ನಿನ್ನೆ ಸಂಜೆ ದಾಳಿಯಲ್ಲಿ ಹಮಾಸ್ನಿಂದ ಉಡಾವಣೆಯಾದ ಹಲವಾರು ರಾಕೆಟ್‌ಗಳನ್ನು ವಾಯು ರಕ್ಷಣೆಯಿಂದ ತಡೆಹಿಡಿಯಲಾಯಿತು. ದಾಳಿಯ ಸ್ವಲ್ಪ ಸಮಯದ ನಂತರ, ಯೇಟರ್‌ನಲ್ಲಿನ ಲಾಂಚರ್ನ್ನು ನಾಶಗೊಳಿಸಲಾಗಿದೆ ಎಂದಿದೆ. ಪಶ್ಚಿಮ ಗೆಲಿಲಿ ಪ್ರದೇಶದಲ್ಲಿ ಲೆಬನಾನ್‌ನಿಂದ ಬಂದಂತಹ ಹಲವಾರು ಉಡಾವಣೆಗಳು ಪತ್ತೆಯಾಗಿವೆ. ಅವುಗಳಲ್ಲಿ ಕೆಲವನ್ನು ಇಸ್ರೇಲ್ನ ರಕ್ಷಣಾ ವ್ಯವಸ್ಥೆಯಾಗಿರುವ ಐರನ್ ಡೋಮ್ ತಡೆಹಿಡಿಯಲಾಗಿದೆ ಮತ್ತು ಉಳಿದವು ತೆರೆದ ಪ್ರದೇಶಗಳಲ್ಲಿ ಬಿದ್ದಿವೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ತಿಳಿಸಿದೆ.
ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಹಮಾಸ್ ಭಯೋತ್ಪಾದಕ ಗುಂಪಿನ ಸೇನಾ ಮುಖ್ಯಸ್ಥನನ್ನು ಹತ್ಯೆ ಮಾಡಿದ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ. ಬುಧವಾರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಮ್ಮ ರಾಷ್ಟ್ರವು ಕಳೆದ ಕೆಲವು ದಿನಗಳಲ್ಲಿ ಶತ್ರುಗಳಿಗೆ ಬಲವಾದ ಹೊಡೆತ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಹಮಾಸ್ ನಿರ್ಮೂಲನೆ ಆಗುವವರೆಗೂ ನಾವು ದಾಳಿಯನ್ನು ಮುಂದುವರೆಸುತ್ತೇವೆ ಎಂದು ಇಸ್ರೇಲ್ ಈ ಮೊದಲೇ ಘೋಷಿಸಿದೆ.
ಇದನ್ನೂ ಓದಿ:ಇಸ್ರೇಲ್ ರಕ್ತಪಾತದ ರೂವಾರಿ ಹಮಾಸ್ ಮಿಲಿಟರಿ ಕಮಾಂಡರ್ ಮುಹಮ್ಮದ್ ದೀಫ್ ಹತ್ಯೆ - Hamas Military Commander Killed