ಕರ್ನಾಟಕ

karnataka

ETV Bharat / health

ವಿಶ್ವ ಆರೋಗ್ಯ ದಿನ: ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಭಾರತ ಇನ್ನೂ ಸಾಧಿಸಬೇಕಿರುವುದೇನು? - WORLD HEALTH DAY - WORLD HEALTH DAY

ಆರೋಗ್ಯ ರಕ್ಷಣೆ ವಿಷಯದಲ್ಲಿ ಭಾರತ ಸಾಧಿಸಿದ್ದು ಎಷ್ಟು ಮತ್ತು ಇನ್ನೂ ಸಾಧಿಸಬೇಕಿರುವುದೇನು ಎಂಬ ಬಗ್ಗೆ ತಜ್ಞರ ಅಭಿಪ್ರಾಯಗಳು ಇಲ್ಲಿವೆ.

World Health Day
World Health Day

By ETV Bharat Karnataka Team

Published : Apr 7, 2024, 3:23 PM IST

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಭಾರತವು ಪೋಲಿಯೊವನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡಿದ್ದು, ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸ್ವಲ್ಪ ಪ್ರಗತಿ ಸಾಧಿಸಿದೆ. ಆದರೆ ಸಾಂಕ್ರಾಮಿಕವಲ್ಲದ ರೋಗಗಳು, ಉಸಿರಾಟದ ಕಾಯಿಲೆಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಈಗಲೂ ದೇಶದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಗಳಾಗಿವೆ ಎಂದು ವಿಶ್ವ ಆರೋಗ್ಯ ದಿನದಂದು ತಜ್ಞರು ಹೇಳಿದ್ದಾರೆ.

ವಿಶ್ವ ಆರೋಗ್ಯ ದಿನವನ್ನು ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ಈ ವರ್ಷದ ಥೀಮ್ 'ನನ್ನ ಆರೋಗ್ಯ, ನನ್ನ ಹಕ್ಕು' ಎಂದಾಗಿದ್ದು, ಎಲ್ಲರಿಗೂ ಗುಣಮಟ್ಟದ ಆರೋಗ್ಯ ರಕ್ಷಣೆ ಒದಗಿಸುವುದು ಈ ಥೀಮ್​ನ ಉದ್ದೇಶವಾಗಿದೆ.

"ಹೃದಯರಕ್ತನಾಳದ ಕಾಯಿಲೆಗಳು, ಮಧುಮೇಹ, ಬೊಜ್ಜು ಮತ್ತು ಅಧಿಕ ರಕ್ತದೊತ್ತಡದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಭಾರತೀಯರು ಎದುರಿಸುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಾಗಿವೆ. ಉಸಿರಾಟದ ಸೋಂಕು ಮತ್ತು ಅಪೌಷ್ಟಿಕತೆ ಕೂಡ ಹೆಚ್ಚುತ್ತಿದೆ" ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಅಧ್ಯಕ್ಷ ಜೆಪಿಎಸ್ ಸಾಹ್ನಿ ಐಎಎನ್ಎಸ್​ಗೆ ತಿಳಿಸಿದರು.

"ಕ್ಷಯ, ಮಲೇರಿಯಾ, ಹೆಪಟೈಟಿಸ್ ಮುಂತಾದ ಸೋಂಕುಕಾರಕ ರೋಗಗಳು ಸಾಕಷ್ಟು ಪ್ರಮಾಣದಲ್ಲಿ ಬಾಧಿಸುತ್ತಿವೆ ಮತ್ತು ಮಧುಮೇಹ, ಹೃದ್ರೋಗ, ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ಮತ್ತು ಶ್ವಾಸನಾಳದ ಅಸ್ತಮಾದಂತಹ ಶ್ವಾಸಕೋಶದ ಕಾಯಿಲೆಗಳು ಮತ್ತೊಂದು ಹಂತದಲ್ಲಿವೆ" ಎಂದು ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ಆಂತರಿಕ ಔಷಧ ನಿರ್ದೇಶಕ ಅಜಯ್ ಅಗರ್ವಾಲ್ ಹೇಳಿದರು.

ಕಳಪೆ ಆಹಾರ ಸೇವನೆ, ದೈಹಿಕ ನಿಷ್ಕ್ರಿಯತೆ, ಧೂಮಪಾನ, ಮದ್ಯಪಾನ, ಪರಿಸರ ಮಾಲಿನ್ಯ ಮತ್ತು ಆರ್ಥಿಕ ಅಸಮಾನತೆಗಳು ಪ್ರಮುಖವಾಗಿ ಭಾರತೀಯರ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಆರೋಗ್ಯ ಸೌಲಭ್ಯಗಳ ಕೊರತೆ, ಗುಣಮಟ್ಟದ ಆರೋಗ್ಯ ರಕ್ಷಣೆಯ ಅಲಭ್ಯತೆ, ಪ್ರಾದೇಶಿಕ ಅಸಮಾನತೆಗಳು ಮತ್ತು ಅಸಮರ್ಪಕ ಜಾಗೃತಿ ಈ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದರು.

"ದೇಶದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ವ್ಯಾಪಕವಾಗಿದೆ. ಇದರಲ್ಲಿ ಎಚ್ಐವಿ, ಕ್ಷಯ, ಮಲೇರಿಯಾ, ಡೆಂಗ್ಯೂ ಜ್ವರ ಮತ್ತು ಎನ್ಸೆಫಾಲಿಟಿಸ್ ನಂತಹ ರೋಗವಾಹಕಗಳಿಂದ ಹರಡುವ ರೋಗಗಳು ಮತ್ತು ಜಠರಗರುಳಿನ ಮತ್ತು ಯಕೃತ್ತಿನ ಕಾಯಿಲೆಗಳು ಸೇರಿವೆ. ಈ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಭಾರತವು ತನ್ನ ಆರೋಗ್ಯ ಬಜೆಟ್ ಹಂಚಿಕೆಯನ್ನು ತುರ್ತಾಗಿ ಹೆಚ್ಚಿಸಬೇಕಾಗಿದೆ" ಎಂದು ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಆಂತರಿಕ ಔಷಧ ನಿರ್ದೇಶಕ ರಾಜೀವ್ ಗುಪ್ತಾ ಐಎಎನ್​ಎಸ್​ಗೆ ತಿಳಿಸಿದರು.

ಮತ್ತೊಂದೆಡೆ ಕಳೆದ ದಶಕದಲ್ಲಿ ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಜೀವಿತಾವಧಿಯ ಹೆಚ್ಚಳ, ಪೋಲಿಯೊ ನಿರ್ಮೂಲನೆ ಮತ್ತು ಇತ್ತೀಚೆಗೆ ಫಿಲೇರಿಯಾಸಿಸ್ ನಿರ್ಮೂಲನೆಯಾಗಿರುವುದನ್ನು ತಜ್ಞರು ಶ್ಲಾಘಿಸಿದ್ದಾರೆ. ಸುಧಾರಿತ ಹೆರಿಗೆ ಪದ್ಧತಿಗಳು, ಸಾರ್ವತ್ರಿಕ ರೋಗನಿರೋಧಕತೆ, ಉತ್ತಮ ನೈರ್ಮಲ್ಯ, ಮಧ್ಯಾಹ್ನದ ಬಿಸಿಯೂಟ ಮತ್ತು ಪೌಷ್ಟಿಕ ಆಹಾರದ ಮೂಲಕ ಶಿಶು ಮರಣವನ್ನು ಕಡಿಮೆ ಮಾಡುವಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿರುವುದನ್ನು ತಜ್ಞರು ಎತ್ತಿ ತೋರಿಸಿದ್ದಾರೆ.

"ಆದಾಗ್ಯೂ ಸುಧಾರಣೆಗೆ ಇನ್ನೂ ಅವಕಾಶವಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳ ಹೆಚ್ಚುತ್ತಿರುವ ಬಳಕೆಯು ಸಾರ್ವಜನಿಕ ಆರೋಗ್ಯವನ್ನು ಮತ್ತಷ್ಟು ಬಲಪಡಿಸುವ ಭರವಸೆಯನ್ನು ಮೂಡಿಸಿದೆ" ಎಂದು ಡಾ. ಎಂದು ಗುಪ್ತಾ ತಿಳಿಸಿದರು.

ಇದನ್ನೂ ಓದಿ : 2030ರ ಹೊತ್ತಿಗೆ ಭಾರತದ ವೈದ್ಯರು, ನರ್ಸ್​​ಗಳಿಗೆ ಭಾರೀ ಬೇಡಿಕೆ: ವರದಿ - Indian Healthcare Professionals

ABOUT THE AUTHOR

...view details