ನವದೆಹಲಿ:ಸ್ಥೂಲಕಾಯ ನಿಯಂತ್ರಣ, ಆರೋಗ್ಯ ಸಮಸ್ಯೆಗೆ ಪರಿಹಾರಕ್ಕಾಗಿ ಜನರು ಕಟ್ಟುನಿಟ್ಟಿನ ಡಯಟ್ ಮಾಡುತ್ತಾರೆ. ಆದರೆ, ಈ ಪದ್ಧತಿಗಳೇ ನಮಗೆ ಕಂಟಕವಾಗುತ್ತಿವೆ ಎಂಬುದು ಹಲವರಿಗೆ ತಿಳಿದಿಲ್ಲದ ಸಂಗತಿ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಮಹತ್ವದ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿನ ಅಂಶಗಳು ಅಚ್ಚರಿ ಮೂಡಿಸುತ್ತವೆ.
ಸಮಸ್ಯೆ ಪರಿಹಾರಕ್ಕಾಗಿ ಜನರು ಮಾಡುವ ಡಯಟ್ನ ತಪ್ಪಾದ ಅನುಕ್ರಮದಿಂದಾಗಿಯೇ ದೇಶದಲ್ಲಿ ಶೇಕಡಾ 56.4 ರಷ್ಟು ಜನರು ಕಾಯಿಲೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಐಸಿಎಂಆರ್ ತಿಳಿಸಿದೆ. ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ಮತ್ತು ಶೇಕಡಾ 80 ರಷ್ಟು 2ನೇ ಹಂತದ ಸಕ್ಕರೆಕಾಯಿಲೆ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ವರದಿ ಹೇಳಿದೆ.
ಅನಾರೋಗ್ಯಕರ ಆಹಾರ ಪದ್ಧತಿಯಿಂದ ಸಮಸ್ಯೆ:ಆರೋಗ್ಯಕ್ಕಾಗಿ ಉತ್ತಮ ಜೀವನಶೈಲಿ ಹೊಂದುವುದು ಅಗತ್ಯ. ಆದರೆ, ಅದರ ಪಾಲನೆಯಲ್ಲಿ ನಾವು ಮಾಡುವ ಎಡವಟ್ಟಿನಿಂದ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತಿದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಮೂಲಕ ಅಕಾಲಿಕ ಮರಣವನ್ನು ಗಮನಾರ್ಹ ಪ್ರಮಾಣದಲ್ಲಿ ತಪ್ಪಿಸಬಹುದು ಎಂದು ಐಸಿಎಂಆರ್ ಹೇಳಿದೆ. ಇದರ ಜೊತೆಗೆ ಕೆಲ ಆಹಾರ ಮಾರ್ಗಸೂಚಿಗಳನ್ನೂ ಅದು ಬಿಡುಗಡೆ ಮಾಡಿದೆ.
ಸಮಗ್ರ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆ- 2019 (ಸಿಎನ್‌ಎನ್‌ಎಸ್) ರ ಮಾಹಿತಿಯ ಪ್ರಕಾರ, ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಗಣನೀಯ ಸಂಖ್ಯೆಯಲ್ಲಿನ ಮಕ್ಕಳು ಸಾಂಕ್ರಾಮಿಕವಲ್ಲದ ಕಾಯಿಲೆಗೆ (ಎನ್‌ಸಿಡಿ) ತುತ್ತಾಗುತ್ತಿದ್ದರೆ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಅಪಾಯಕಾರಿ ಸಮಸ್ಯೆಗಳಿಗೂ ಒಳಗಾಗುತ್ತಿದ್ದಾರೆ ಎಂದಿದೆ. ಅಪೌಷ್ಟಿಕತೆ, ಕಡಿಮೆ ತೂಕ, ಹದಿಹರೆಯದವರಲ್ಲಿ ಚಯಾಪಚಯ ಕ್ರಿಯೆಯ ಬದಲಾವಣೆಯು ಆತಂಕ ತರುತ್ತದೆ.
ಸಕ್ಕರೆಯುಕ್ತ ಮತ್ತು ಕೊಬ್ಬಿನಿಂದ ಕೂಡಿದ ಸಂಸ್ಕರಿಸಿದ ಆಹಾರಗಳ ಸೇವನೆ, ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ಸೂಕ್ಷ್ಮ ಪೋಷಕಾಂಶಗಳ ಕೊರತೆ, ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆ ತುತ್ತಾಗಬೇಕಾಗುತ್ತದೆ. ಆರೋಗ್ಯಕರ ಪದ್ಧತಿಗಿಂತ ಅನಾರೋಗ್ಯಕರ (ಸಂಸ್ಕರಿಸಿದ, ಹೆಚ್ಚಿನ ಕೊಬ್ಬು, ಸಕ್ಕರೆ ಮತ್ತು ಉಪ್ಪು) ಆಹಾರ ಪದ್ಧತಿಯೇ ನಮಗೆ ಮಾರಕವಾಗುತ್ತಿದೆ ಎಂದು ಅಧ್ಯಯನವು ಹೇಳಿದೆ.
ಮಕ್ಕಳಲ್ಲಿ ಕಾಡುತ್ತಿರುವ ವಿವಿಧ ಸಮಸ್ಯೆಗಳು:ಸಿಎನ್‌ಎನ್‌ಎಸ್ ಅಧ್ಯಯನವನ್ನು ಉಲ್ಲೇಖಿಸಿ ಐಸಿಎಂಆರ್, 1 ರಿಂದ 4 ವರ್ಷ ವಯಸ್ಸಿನ ಶೇಕಡಾ 40.6 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, ಶೇಕಡಾ 32.1 ಪ್ರತಿಶತ ಮಕ್ಕಳು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ. 10 ರಿಂದ 19 ವರ್ಷ ವಯಸ್ಸಿನ ಶೇಕಡಾ 36.7 ರಷ್ಟು ಮಕ್ಕಳಲ್ಲಿ ಫೋಲೇಟ್ ಕೊರತೆಯಿಂದೆ ಎಂಬುದನ್ನು ಗುರುತಿಸಿದೆ.