Hug Benefits For Health In Kannada:ನಮ್ಮಲ್ಲಿ ಅನೇಕರು ದುಃಖವಾಗಲಿ ಅಥವಾ ಸಂತೋಷವಾಗಲಿ ಇತರರನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತೇವೆ. ಹೀಗೆ ಮಾಡುವುದರಿಂದ ಮನಸ್ಸಿನ ಭಾವನೆಗಳು ನಿಯಂತ್ರಣಕ್ಕೆ ಬರುತ್ತವೆ. ಇವೆರಡೂ ಭಾವನೆಗಳನ್ನು ನಿಯಂತ್ರಿಸುವುದರ ಜೊತೆಗೆ ಅನೇಕ ಪ್ರಯೋಜನಗಳನ್ನೂ ಹೊಂದಬಹುದು ಎಂಬುದು ಸಂಶೋಧಕರ ಮಾತು.
'ಉಪ್ಪಿ ದಾದಾ ಎಂಬಿಬಿಎಸ್' ಚಿತ್ರದಲ್ಲಿ ಆಸ್ಪತ್ರೆಯ ಕಸ ಗುಡಿಸುವವನಿಗೆ ತುಂಬಾ ಕೋಪ ಬರುತ್ತದೆ. ಆ ಸಮಯದಲ್ಲಿ ಉಪ್ಪಿ ಅವನಿಗೆ ಪ್ರೀತಿಯ ಅಪ್ಪುಗೆ ನೀಡುತ್ತಾರೆ. ತಕ್ಷಣವೇ ಆತನ ಕೋಪ ಕಡಿಮೆಯಾಗುತ್ತದೆ. ಅದೇ ರೀತಿ, ನಿಜ ಜೀವನದಲ್ಲಿ ಅಪ್ಪುಗೆಗೆ ಅಷ್ಟೊಂದು ಶಕ್ತಿಯಿದೆ ಎನ್ನುತ್ತಾರೆ ತಜ್ಞರು.
ನಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಕಷ್ಟದಲ್ಲಿದ್ದಾಗ, ಅವರಿಗೆ ಒಂದು ಸಣ್ಣ ಅಪ್ಪುಗೆಯನ್ನು ನೀಡಿದರೆ ನಾನಿದ್ದೇನೆ ಎನ್ನುವ ಭರವಸೆ ನೀಡಬಹುದು ಎಂದು ತಜ್ಞರು ಹೇಳುತ್ತಾರೆ. ಆಳವಾಗಿ ದುಃಖಿತರನ್ನು ತಬ್ಬಿಕೊಳ್ಳುವುದು ಉತ್ತಮ ಸಹಾನುಭೂತಿ ತೋರಿಸಿದಂತಾಗುತ್ತದೆ. ಒತ್ತಡದಿಂದ ಹೊರಬರುವ ಶಕ್ತಿ ನಾವು ನೀಡುವ ಅಪ್ಪುಗೆಯಲ್ಲಿದೆ.
ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಪ್ಪುಗೆಯಿಂದ ಸುರಕ್ಷತೆಯ ಪ್ರಜ್ಞೆಯನ್ನು ಉತ್ತೇಜಿಸುವ ಹಾರ್ಮೋನ್ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಜರ್ಮನಿಯ ಫ್ರೀಬರ್ಗ್ ವಿಶ್ವವಿದ್ಯಾಲಯದ ಮನೋವಿಜ್ಞಾನದ ಪ್ರಾಧ್ಯಾಪಕ ಮಾರ್ಕಸ್ ಹೆನ್ರಿಚ್ಸ್, ಆಕ್ಸಿಟೋಸಿನ್ ಮಾನವರಲ್ಲಿ ನಂಬಿಕೆ ಹೆಚ್ಚಿಸುತ್ತದೆ ಎಂಬ ವಿಷಯದ ಕುರಿತು ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಅಪ್ಪುಗೆ ನೀಡುವ ಮೂಲಕ ಯಾರೋ ಒಬ್ಬರಿದ್ದಾರೆ ಎಂಬ ಭಾವನೆ ಮೂಡಿಸಿ ಅವರಿಗೆ ಸಮಾಧಾನ ನೀಡುತ್ತದೆ ಎಂಬ ವಿಚಾರ ಸಂಶೋಧನೆಯಿಂದ ಬಹಿರಂಗವಾಗಿದೆ.
ಆತ್ಮೀಯತೆ ಹೆಚ್ಚುತ್ತೆ:ರಿಲೇಶನ್ಶಿಪ್ನಲ್ಲಿ ಆಗಾಗ ಹಗ್ ಮಾಡಿಕೊಳ್ಳುವವರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು. ಪ್ರೇಮಿಗಳು ಪರಸ್ಪರ ಅಪ್ಪಿಕೊಂಡಾಗ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ. ಪರಿಣಾಮವಾಗಿ, ಒತ್ತಡವೂ ದೂರವಾಗುತ್ತದೆ ಮತ್ತು ಸಂತೋಷವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಒಂದು ಸಣ್ಣ ಅಪ್ಪುಗೆ ನೀವಿಷ್ಟಪಡುವ ವ್ಯಕ್ತಿಯೊಂದಿಗೆ ಸಂಪರ್ಕವನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇತರರ ನಡುವೆ ಸಂಘರ್ಷ ಉಂಟಾದಾಗ ಅವರನ್ನು ಅಪ್ಪಿಕೊಳ್ಳುವುದರಿಂದ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ ಮತ್ತು ಅವರ ಮೇಲಿನ ನಂಬಿಕೆ ಹೆಚ್ಚಾಗುತ್ತದೆ. ಇದರಿಂದ ಇಬ್ಬರ ನಡುವಿನ ಆತ್ಮೀಯತೆ ಗಟ್ಟಿಯಾಗುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.