ಹೈದರಾಬಾದ್: ಅಸ್ಸಾಂನಲ್ಲಿ ಏಡ್ಸ್ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಎಂದರೆ ಬಳಕೆ ಮಾಡಿದ ಚುಚ್ಚುಮದ್ದನ್ನು ಹಂಚಿಕೊಳ್ಳುತ್ತಿರುವುದರಿಂದ ಸೋಂಕು ಹರಡುತ್ತಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಕೇಶಬ್ ಮಹಾಂತ ತಿಳಿಸಿದ್ದಾರೆ.
ಇದೇ ವೇಳೆ ಸರ್ಕಾರ ಎನ್ಜಿಒ ಬೆಂಬಲದೊಂದಿಗೆ ಎಚ್ಐವಿ ಪಾಸಿಟಿವ್ ಜನರಿಗೆ ಸಹಾಯ ಮಾಡುತ್ತಿದೆ. ಸೋಂಕಿತರ ಗೌಪತ್ಯೆಯನ್ನು ಕಾಪಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಸ್ಸಾಂ ವಿಧಾನಸಭೆಯ ಪ್ರಶ್ನೋತ್ತರದ ವೇಳೆ ಕಾಂಗ್ರೆಸ್ ಶಾಸಕ ಸಿಬಾಮೋನಿ ಬೋರಾ, ರಾಜ್ಯದ ಎಚ್ಐವಿ ಹರಡುವಿಕೆಯ ವಿಷಯವನ್ನು ಪ್ರಸ್ತಾಪಿಸಿ, ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳ ಕುರಿತು ಪ್ರಶ್ನಿಸಿದರು. ಸೋಂಕಿನಿಂದ ಅರ್ಧದಷ್ಟು ಔಷಧದ ಡೀಲರ್ಗಳು ಕೂಡ ಪರಿಣಾಮಕ್ಕೆ ಒಳಗಾಗಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ಸೋಂಕು ಉಲ್ಬಣಗೊಂಡ ಬಳಿಕ ಸರ್ಕಾರ ಎಚ್ಐವಿ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚಿನ ಗಮನವನ್ನು ನೀಡಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ರಾಜ್ಯದಲ್ಲಿ 2002 ಮತ್ತು 2023 ರ ನಡುವೆ 89,84,519 ಎಚ್ಐವಿ ಪರೀಕ್ಷೆ ನಡೆಸಲಾಗಿದ್ದು, 31,729 ಎಚ್ಐವಿ ಏಡ್ಸ್ ಸೋಂಕುಗಳು ಪತ್ತೆಯಾಗಿವೆ. 2023ರ ಡಿಸೆಂಬರ್ನಲ್ಲಿ ನಡೆಸಲಾದ 9,90,372 ಪರೀಕ್ಷೆಗಳಲ್ಲಿ ಒಟ್ಟು 5,791 ಪ್ರಕರಣ ಕಂಡು ಬಂದಿದ್ದು, ಸೋಂಕಿನಲ್ಲಿ ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.