ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಸಹಾಯ ಮಾಡಿದ್ದ ಕೋವಿನ್ ಪೋರ್ಟಲ್ ಅನ್ನು ಇದೀಗ ರಾಷ್ಟ್ರೀಯ ಪ್ರತಿರಕ್ಷಣಾ ಕಾರ್ಯಕ್ರಮಕ್ಕಾಗಿ ಯುವಿನ್ ಆಗಿ ಬದಲಾಯಿಸಲಾಗಿದೆ.
ಯುವಿನ್ ಮೂಲಕ ನವಜಾತ ಶಿಶು ಮತ್ತು ತಾಯಂದಿರ ಹೆಸರು, ಅವರು ಹೊಂದಿರುವ ನಿರೋಧಕತೆಯ ದಾಖಲೆಯನ್ನು ಲಿಂಕ್ ಮಾಡಿ ಕಾಲಕಾಲಕ್ಕೆ ಮಾಹಿತಿ ಒದಗಿಸಲಾಗುತ್ತದೆ. ಯುವಿನ್ ಪೋರ್ಟಲ್‌ನಲ್ಲಿ ಮಗುವಿನ ಹೆಸರನ್ನು ಸೇರಿಸಿದ ನಂತರ, ಅಗತ್ಯ ಲಸಿಕೆ ಸೌಲಭ್ಯವು ಹತ್ತಿರದ ಕೇಂದ್ರದಲ್ಲಿ ಸಿಗುವ ಜೊತೆಗೆ ಮಗುವಿಗೆ ಕಾಲಕಾಲಕ್ಕೆ ಬೇಕಾದ ಲಸಿಕೆಯ ಕುರಿತು ನೆನಪಿಸಲಾಗುತ್ತದೆ. ಅಂಗನವಾಡಿ ಮತ್ತು ಶಾಲಾ ಆರೋಗ್ಯ ದಾಖಲೆಯಲ್ಲಿ ಈ ದಾಖಲೆಗಳು ಇರಲಿವೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ತಿಳಿಸಿದ್ದಾರೆ.
ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ 77ನೇ ವಿಶ್ವ ಆರೋಗ್ಯ ಸಮ್ಮೇಳನದಲ್ಲಿ ಮಾತನಾಡಿದ ಭಾರತೀಯ ನಿಯೋಗದ ಮುಖ್ಯಸ್ಥ ಚಂದ್ರು, ಭಾರತದ ಡಿಜಿಟಲ್ ಆರೋಗ್ಯ ಪ್ರಗತಿಯನ್ನು ವಿವರಿಸಿದರು.
ಭಾರತದ ಡಿಜಿಟಲ್ ಆರೋಗ್ಯ ಕ್ರಾಂತಿ ಕುರಿತದ ಕ್ಲಾಡ್ ದೇಶಗಳೊಂದಿಗಿನ ಪ್ಲೀನರಿ ಸೆಷನ್ನಲ್ಲಿ ಮಾತನಾಡಿದ ಅವರು, ಡಿಜಿಟಲ್ ಸಾರ್ವಜನಿಕ ಸೌಕರ್ಯದ ಸಾಮರ್ಥ್ಯವನ್ನು ಒತ್ತಿ ಹೇಳಿದರು. 100ಕ್ಕೂ ಹೆಚ್ಚು ದೇಶಗಳು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಜಾಗತಿಕವಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಯ ಸಹಕಾರಿ ಯತ್ನವನ್ನು ತಿಳಿಸಲಾಯಿತು.