ನವದೆಹಲಿ:ಜಾಗತಿಕ ಅಧ್ಯಯನದ ಪ್ರಕಾರ ಭಾರತದಲ್ಲಿ 45 - 59 ವಯೋಮಾನದ ಶೇ 16.2ರಷ್ಟು ಅಂದರೆ, 22 - ಕೋಟಿ ಮಧ್ಯವಯಸ್ಕರು ಆರೋಗ್ಯ ದುರ್ಬಲತೆ ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದು ಅಧ್ಯಯನವೊಂದರಲ್ಲಿ ಕಂಡು ಬಂದಿದೆ. ದುರ್ಬಲತೆ ಎಂಬುದು ವ್ಯಕ್ತಿಯ ದೇಹದಲ್ಲಿನ ನಿಶಕ್ತಿಯನ್ನು ಸೂಚಿಸುತ್ತದೆ. ಅಂದರೆ ಅವರಲ್ಲಿನ ರೋಗ, ಗಾಯಗೊಳ್ಳುವಿಕೆಯನ್ನು ಒಳಗೊಂಡಿದೆ. ದೌರ್ಬಲ್ಯ ಎಂಬುದು ಸಾಮಾನ್ಯವಾಗಿ ವಯಸ್ಸಾದವರೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದರೂ ನಿರ್ದಿಷ್ಟ ವಯಸ್ಸಿನ ಗುಂಪಿನ ಜನರಿಗೆ ಸೀಮಿತವಾಗಿಲ್ಲ.
ಈ ಅಧ್ಯಯನವನ್ನು ಬಿಎಂಜೆ ಓಪನ್ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಮಧ್ಯವಯಸ್ಸಿನ ಮಂದಿಯಲ್ಲಿ ದೌರ್ಬಲ್ಯ ಹೆಚ್ಚುತ್ತಿರುವ ಕುರಿತು ತಿಳಿಸಲಾಗಿದೆ. ದೆಹಲಿ ಮತ್ತು ಆಸ್ಟ್ರೇಲಿಯಾದ ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಮತ್ತು ಇಂಗ್ಲೆಂಡ್ನ ತಂಡ ಈ ಅಧ್ಯಯನ ನಡೆಸಿದ್ದು, ಈ ವೇಳೆ 60 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 60 ಕೋಟಿ ಅಂದರೆ 43.2ರಷ್ಟು ಮಂದಿ ದುರ್ಬಲತೆ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಅಧ್ಯಯನ ತೋರಿಸಿದೆ.
ನಿರ್ದಿಷ್ಟ ವಯಸ್ಸು ಮತ್ತು ಲಿಂಗಗಳ ಹೊರತಾಗಿ ಎಲ್ಲ ವಯಸ್ಕರಲ್ಲಿ ದುರ್ಬಲತೆ ಕಂಡಿದ್ದು, ಇದರೊಂದಿಗೆ ಆಸ್ಪತ್ರೆಗೆ ದಾಖಲಾಗುವುದು, ಬೀಳುವಿಕೆ ಮತ್ತು ಕಳಪೆ ಅರಿವಿನ ಸಮಸ್ಯೆ ಹೊಂದಿರುವುದು ಸಹ ಕಂಡು ಬಂದಿದೆ. ಫಲಿತಾಂಶವನ್ನು ಗಮನಿಸಿದಾಗ ಈ ದುರ್ಬಲತೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿದೆ. ಅಚ್ಚರಿ ಅಂಶ ಎಂದರೆ ತಮ್ಮ ಅವಶ್ಯಕತೆಗೆ ದಿನಕ್ಕೆ ಹೆಚ್ಚು ಹಣ ವ್ಯಯ ಮಾಡುವವರಲ್ಲಿ ಇದು ಹೆಚ್ಚಾಗಿ ಕಂಡು ಬಂದಿದೆ.
ದುರ್ಬಲ ಜನರು ಸಾಮಾನ್ಯವಾಗಿ ಹೆಚ್ಚಿನ ಆರೋಗ್ಯ ವೆಚ್ಚಗಳನ್ನು ಹೊಂದಿರುತ್ತಾರೆ. ಇದರಿಂದ ಅವರು ದೈನಂದಿನ ಅಗತ್ಯಗಳಿಗಾಗಿ ಹೆಚ್ಚು ಖರ್ಚು ಮಾಡುತ್ತಾರೆ. ಆದಾಗ್ಯೂ, ಖರ್ಚಿನ ಬದಲಾಗಿ ಮನೆಯ ಆದಾಯವನ್ನು ನೋಡಿದಾಗ, ಈ ಬಗ್ಗೆ ಸ್ಪಷ್ಟ ಸಂಬಂಧ ಕಂಡು ಬಂದಿಲ್ಲ ಎಂದು ದಿ ಜಾರ್ಜ್ ಇನ್ಸಿಟಿಟ್ಯೂಟ್ನ ಕಾರ್ಯಕಾರಿ ನಿರ್ದೇಶಕ ವಿವೇಕಾನಂದ್ ತಿಳಿಸಿದ್ದಾರೆ.