ಕರ್ನಾಟಕ

karnataka

ETV Bharat / entertainment

ಪುಷ್ಪ-2 ಚಿತ್ರದ ಬೆನಿಫಿಟ್ ಶೋದಲ್ಲಿ ಅಲ್ಲು ಅರ್ಜುನ್​: ಕಾಲ್ತುಳಿತದಲ್ಲಿ ಮಹಿಳೆ ಸಾವು - PUSHPA 2 BENEFIT SHOW

ಪುಷ್ಪ-2 ಚಿತ್ರದ ಬೆನಿಫಿಟ್ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.

pushpa 2
ಪುಷ್ಪ-2 ಚಿತ್ರದ ಪೋಸ್ಟರ್​ (pushpa 2 Cinema)

By ETV Bharat Karnataka Team

Published : Dec 5, 2024, 9:30 AM IST

ಹೈದರಾಬಾದ್, ತೆಲಂಗಾಣ:ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪುಷ್ಪ-2 ಚಿತ್ರ ರಿಲೀಸ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ನಡುವೆ ದುಃಖಕರ ಘಟನೆಯೊಂದು ನಡೆದಿದ್ದು, ಅಭಿಮಾನಿಗಳ ಮಧ್ಯೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಹೈದರಾಬಾದ್​ನ ಆರ್​ಟಿಸಿ ಕ್ರಾಸ್ ರೋಡ್​​ನ ಸಂಧ್ಯಾ ಥಿಯೇಟರ್​ನಲ್ಲಿ ಬೆನಿಫಿಟ್ ಶೋ ಏರ್ಪಡಿಸಲಾಗಿತ್ತು. ಈ ಶೋಗೆ ನಾಯಕ ಅಲ್ಲು ಅರ್ಜುನ್​ ಆಗಮಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ರಾತ್ರಿ 9.30ಕ್ಕೆ ಬೆನಿಫಿಟ್ ಶೋಗೆ ಚಿತ್ರದ ನಾಯಕ ಅಲ್ಲು ಅರ್ಜುನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸ್ಟಾರ್ ಹೀರೋ ನೋಡಲು ಮುಗಿಬಿದ್ದರು. ಆಗ ಕಾಲ್ತುಳಿತ ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಭಿಮಾನಿಗಳನ್ನು ಚದುರಿಸಿದರು.

ಆದರೆ, ಪೊಲೀಸರು ಜನರನ್ನು ಚದುರಿಸುವ ವೇಳೆ ದಿಲ್‌ಸುಖ್‌ನಗರದ ರೇವತಿ ಎಂಬ ಮಹಿಳೆ ತಮ್ಮ ಮಗನೊಂದಿಗೆ ಕೆಳಗೆ ಬಿದ್ದು ಗುಂಪಿನ ಕಾಲುಗಳಡಿ ಸಿಲುಕಿದ್ದಾರೆ. ಗಂಭೀರ ಗಾಯಗೊಂಡ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ತಕ್ಷಣ ಪೊಲೀಸರು ತಾಯಿ ಮತ್ತು ಮಗನನ್ನು ಪಕ್ಕಕ್ಕೆ ಕರೆದೊಯ್ದು ಸಿಪಿಆರ್ ಮಾಡಿದ್ದಾರೆ. ಬಳಿಕ ತಾಯಿಯನ್ನು ಕೂಡಲೇ ಆರ್‌ಟಿಸಿ ಕ್ರಾಸ್‌ರೋಡ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮೃತಪಟ್ಟಿದ್ದಾರೆ. ಮಗನ ಸ್ಥಿತಿ ಗಂಭೀರವಾಗಿದ್ದರಿಂದ ನಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

ಪುಷ್ಪಾ-2 ಬೆನಿಫಿಟ್ ಶೋ ವೀಕ್ಷಿಸಲು ಪತಿ, ಪತ್ನಿ ಮಕ್ಕಳು ಸೇರಿ ಕುಟುಂಬದ ನಾಲ್ವರೂ ಬಂದಿದ್ದರು. ಇವರಲ್ಲಿ ಕಾಲ್ತುಳಿತದಲ್ಲಿ ತಾಯಿ ಮತ್ತು ಮಗ ಗಾಯಗೊಂಡಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂಧ್ಯಾ ಥಿಯೇಟರ್ ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಇನ್ನೂ ಕೆಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೀರೋ ಕಟೌಟ್​​ಗೆ ಪಾಲಾಭಿಷೇಕ:ಇದೇ ವೇಳೆ ಪುಷ್ಪ-2 ಬೆನಿಫಿಟ್ ಶೋಗಳ ಪಾಸಿಟಿವ್ ಟಾಕ್​ನಿಂದಾಗಿ ಬೆಳಗ್ಗೆಯಿಂದಲೇ ಥಿಯೇಟರ್​​ಗಳ ಮುಂದೆ ನೂಕುನುಗ್ಗಲು ಕಂಡುಬರುತ್ತಿದೆ. ಕೊಂಪಳ್ಳಿಯಲ್ಲಿರುವ ಏಷ್ಯನ್ ಸಿನಿ ಪ್ಲಾನೆಟ್​​ನಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಬೆಳಗ್ಗೆ 5 ಗಂಟೆಯಿಂದಲೇ ತಮ್ಮ ನೆಚ್ಚಿನ ನಾಯಕ ಅಲ್ಲು ಅರ್ಜುನ್ ಅವರ ಚಿತ್ರಕ್ಕೆ ಹಾಲು ಅರ್ಪಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಹಲವು ಥಿಯೇಟರ್‌ಗಳಲ್ಲಿ 'ಪುಷ್ಪ 2' ಸಿನಿಮಾ ಮಿಡ್ ನೈಟ್ ಶೋ ರದ್ದು

ABOUT THE AUTHOR

...view details