ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ರಾಮಾಯಣ'ದ ಸಲುವಾಗಿ ಸಖತ್ ಸುದ್ದಿಯಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ದೇಹ ದಂಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್ಗಳಾದ 'ರಾಮಾಯಣ' ಮತ್ತು 'ಅನಿಮಲ್ ಪಾರ್ಕ್'ನ ಪಾತ್ರಗಳಿಗೆ ಜೀವ ತುಂಬಲು ತೀವ್ರ ತಯಾರಿ ನಡೆಸುತ್ತಿದ್ದಾರೆ.
41ರ ಹರೆಯದ ನಟನ ಕೊನೆಯ ಚಿತ್ರ ಅನಿಮಲ್ ಅಭೂತಪೂರ್ವ ಯಶಸ್ಸು ಕಂಡಿದೆ. ಪ್ರಸ್ತುತ ನಿತೇಶ್ ತಿವಾರಿ ಅವರ 'ರಾಮಾಯಣ'ದಲ್ಲಿ ಭಗವಾನ್ ಶ್ರೀರಾಮನನ್ನು ಚಿತ್ರಿಸಲು ಸಜ್ಜಾಗುತ್ತಿದ್ದಾರೆ. 2023ರ ಹಿಟ್ ಚಿತ್ರದ ಸೀಕ್ವೆಲ್ ಅನಿಮಲ್ ಪಾರ್ಕ್‌ಗೂ ಸಹ ಸಿದ್ಧರಾಗುತ್ತಿದ್ದಾರೆ.
ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ಶಿವೋಹಮ್ ಹಂಚಿಕೊಂಡ ಫೋಟೋಗಳು ರಣ್ಬೀರ್ ಕಪೂರ್ ಅವರ ಫಿಟ್ನೆಸ್ ಟ್ರೇನಿಂಗ್ ರಿಸಲ್ಟ್ ಅನ್ನು ತೋರಿಸಿದೆ. ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಂತಹ ಸ್ಟಾರ್‌ಗಳಿಗೆ ತರಬೇತಿ ಕೊಡುವ ಮೂಲಕ ಹೆಸರುವಾಸಿಯಾಗಿರೋ ಶಿವೋಹಂ, ರಣ್ಬೀರ್ ಅವರ ಫೋಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಕಠಿಣ ತರಬೇತಿಯ ಫಲವಾಗಿ ಪವರ್ಫುಲ್ ಫಿಟ್ನೆಸ್ ಬಾಡಿಯನ್ನು ಸೂಪರ್ ಸ್ಟಾರ್ ತಮ್ಮದಾಗಿಸಿಕೊಂಡಿದ್ದಾರೆ.
ಶಿವೋಹಂ ಅವರ ಲೇಟೆಸ್ಟ್ ಇನ್ಸ್ಟಾಗ್ರಾಮ್ ಪೋಸ್ಟ್ ಎರಡೂ ಸಿನಿಮಾಗಳಿಗಾಗಿನ ರಣ್ಬೀರ್ ಅವರ ರೂಪಾಂತರವನ್ನು ಪ್ರದರ್ಶಿಸುತ್ತದೆ. ಪೋಸ್ಟ್, 'ಅನಿಮಲ್' ಅವತಾರ ಮತ್ತು 'ರಾಮಾಯಣ'ಕ್ಕಾಗಿನ ಅವರ ತಯಾರಿಯ ಒಂದು ನೋಟ ಒದಗಿಸಿದೆ. ರಣ್ಬೀರ್ ಯಶಸ್ಸಿಗೆ ಅವರ ಅಚಲ ಇಚ್ಛಾಶಕ್ತಿ ಮತ್ತು ಬದ್ಧತೆಯೇ ಕಾರಣ ಎಂದು ತರಬೇತುದಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.