ಆರ್ಆರ್ಆರ್ ಖ್ಯಾತಿಯ ಜೂನಿಯರ್ ಎನ್‌ಟಿಆರ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ''ದೇವರ''. ಬಹುನಿರೀಕ್ಷಿತ ಚಿತ್ರದ ಭರದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆದಿದ್ದು, ಸದ್ಯ ಚಿತ್ರತಂಡ ಗೋವಾಗೆ ಶಿಫ್ಟ್ ಆಗಿದೆ.
ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ 'ದೇವರ: ಭಾಗ 1'ರ ಮುಂದಿನ ಹಂತದ ಚಿತ್ರೀಕರಣವನ್ನಿಂದು ಪ್ರಾರಂಭಿಸಿದ್ದಾರೆ. ಇಂದು ಆರಂಭವಾಗಿರೋ ಈ ಶೂಟಿಂಗ್ ಒಂದು ವಾರದವರೆಗೆ ನಡೆಯಲಿದ್ದು, ಹಾಡೊಂದರ ಚಿತ್ರೀಕರಣವನ್ನು ಒಳಗೊಂಡಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ಜಾಹ್ನವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿದ್ದಾರೆ. ಕರಾವಳಿ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ.
'ದೇವರ' ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗ ಇದೇ ಸಾಲಿನಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. ಜಾಹ್ನವಿ ಕಪೂರ್ ಅವರ ಮೊದಲ ತೆಲುಗು ಚಿತ್ರವಿದು. ಅಲ್ಲದೇ ಇದೇ ಮೊದಲ ಬಾರಿ ಜೂನಿಯರ್ ಎನ್‌ಟಿಆರ್ ಜೊತೆ ತೆರೆಹಂಚಿಕೊಂಡಿದ್ದಾರೆ. ಇನ್ನು ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಕೊರಟಾಲ ಶಿವ ಕಾಂಬಿನೇಶನ್ನ ಎರಡನೇ ಸಿನಿಮಾವಿದು. 'ಜನತಾ ಗ್ಯಾರೇಜ್' ಈ ನಟ-ನಿರ್ದೇಶಕ ಜೋಡಿಯ ಚೊಚ್ಚಲ ಚಿತ್ರ. ಸಿನಿಮಾ ಬಿಡುಗಡೆಯ ದಿನಾಂಕ ಮತ್ತು ಪೋಸ್ಟರ್ ಅನ್ನು ಈ ಹಿಂದೆ ಅನಾವರಣಗೊಳಿಸಲಾಗಿದೆ. ರೋಮಾಂಚಕ ಸಿನಿಮೀಯ ಅನುಭವ ಒದಗಿಸುವ ತವಕದಲ್ಲಿ ಚಿತ್ರತಂಡವಿದೆ.
ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದ ಮೊದಲ ಭಾಗ ದಸರಾ ಸಂದರ್ಭ ಅಕ್ಟೋಬರ್ 10ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ನಿರ್ಮಾಣದ ಈ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್ ಪ್ರಸ್ತುತಪಡಿಸಲಿದ್ದಾರೆ. ಚಿತ್ರಕ್ಕೆ ಜನಪ್ರಿಯ ಗಾಯಕ ಅನಿರುದ್ಧ್ ರವಿಚಂದರ್ ಅವರ ಸಂಗೀತವಿರಲಿದೆ. ಆರ್ ರತ್ನವೇಲು ಛಾಯಾಗ್ರಹಣ ನಿರ್ವಹಿಸಿದ್ದಾರೆ.