ರಿಷಬ್ ಶೆಟ್ಟಿ, ಕನ್ನಡ ಚಿತ್ರರಂಗ ಪ್ರತಿಭಾವಂತ ನಟ. ಅಭಿನಯಕ್ಕೆ ಮಾತ್ರ ಸೀಮಿತವಾಗಿರದೇ ಸಿನಿಮಾದ ವಿವಿಧ ವಿಭಾಗಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಕಾಂತಾರದ ಮತ್ತೊಂದು ಭಾಗದ ಜೊತೆಗೆ 'ಲಾಫಿಂಗ್ ಬುದ್ಧ' ಸಿನಿಮಾ ಸಲುವಾಗಿಯೂ ಸುದ್ದಿಯಲ್ಲಿದ್ದಾರೆ. ಇದು ನಟ ನಿರ್ಮಿಸುತ್ತಿರುವ ಹೊಸ ಚಿತ್ರ.
ಸಿನಿಮಾದ ಮೊದಲ ಹಾಡು:ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗುತ್ತಿರುವ 'ಲಾಫಿಂಗ್ ಬುದ್ಧ' ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಸಿನಿಮಾ ಪ್ರಚಾರ ಶುರುಹಚ್ಚಿಕೊಳ್ಳಲು ನಿರ್ಧರಿಸಿದೆ. ಅದರ ಭಾಗವಾಗಿ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನ ನಿಗದಿ ಆಗಿದೆ. ''ಎಂಥ ಚೆಂದಾನೆ ಇವಳು'' ಶೀರ್ಷಿಕೆಯ ಹಾಡು ಇದಾಗಿದೆ.
ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ': ವಿಭಿನ್ನ ಕಥಾಹಂದರಗಳನ್ನೊಳಗೊಂಡ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿ, ಅಭಿನಯಿಸೋದು ಮಾತ್ರವಲ್ಲದೇ ಸಿನಿಮಾ ನಿರ್ಮಾಣ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಅವರ ಮುಂದಿನ ಬಹುನಿರೀಕ್ಷಿತವಿದು. ರಿಷಬ್ ಶೆಟ್ಟಿ ಫಿಲ್ಮ್ಸ್ಅಡಿ ನಿರ್ಮಾಣಗೊಳ್ಳುತ್ತಿರುವ 'ಲಾಫಿಂಗ್ ಬುದ್ಧ' ಸಿನಿಮಾದ ಮೊದಲ ಗೀತೆ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಈ ವಿಚಾರವನ್ನು ಸ್ವತಃ ನಿರ್ಮಾಪಕ ರಿಷಬ್ ಶೆಟ್ಟಿ ಅವರೇ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಪೋಸ್ಟ್: ತಮ್ಮ ಅಧಿಕೃತ ಇನ್ಸ್ಟಾಗ್ರಾಮ್, ಎಕ್ಸ್ ಖಾತೆಗಳಲ್ಲಿ ಸಾಂಗ್ ರಿಲೀಸ್ ಅನೌನ್ಸ್ಮೆಂಟ್ನ ಸಣ್ಣ ಗ್ಲಿಂಪ್ಸ್ ಒಂದನ್ನು ಹಂಚಿಕೊಂಡ ರಿಷಬ್ ಶೆಟ್ಟಿ, 'ಎಂಥ ಚೆಂದಾನೆ ಇವಳು', ರಿಷಬ್ ಶೆಟ್ಟಿ ಫಿಲ್ಮ್ಸ್ ಯೂಟ್ಯೂಬ್ ಚಾನಲ್ನಲ್ಲಿ ಲಾಫಿಂಗ್ ಬುದ್ಧ ಸಿನಿಮಾದ ಮೊದಲ ಸಾಂಗ್ ಆಗಸ್ಟ್ 7ರಂದು ಅನಾವರಣಗೊಳ್ಳಲಿದೆ'' ಎಂದು ಬರೆದುಕೊಂಡಿದ್ದಾರೆ.