ನವದೆಹಲಿ:5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ನಪಾಸಾದರೂ ಉತ್ತೀರ್ಣ ಮಾಡಲು ಇದ್ದ 'ನೋ ಡಿಟೆನ್ಷನ್ ಪಾಲಿಸಿ'ಯನ್ನು ಕೇಂದ್ರ ಸರ್ಕಾರ ಇಂದು ರದ್ದುಪಡಿಸಿದೆ. ಇನ್ನು ಮುಂದೆ ಮಕ್ಕಳು ಫೇಲ್ ಆದಲ್ಲಿ ಮತ್ತೆ ಅದೇ ತರಗತಿಯಲ್ಲೇ ಮರಳಿ ವ್ಯಾಸಂಗ ಮಾಡಬೇಕಾಗುತ್ತದೆ.
ಕೇಂದ್ರದ ಈ ನಿರ್ಧಾರವು ನೇರವಾಗಿ ತನ್ನ ಸುಪರ್ದಿಯಲ್ಲಿ ಬರುವ ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಸೈನಿಕ ಶಾಲೆಗಳಿಗೆ ಅನ್ವಯಿಸುತ್ತದೆ. ಶಿಕ್ಷಣ ಸಂವಿಧಾನದ ರಾಜ್ಯ ಪಟ್ಟಿಯಲ್ಲಿ ಬರುವ ಕಾರಣ, ಈ ನೀತಿಯನ್ನು ಅನುಸರಿಸಬೇಕೇ, ಬೇಡವೇ ಎಂಬುದನ್ನು ಆಯಾ ರಾಜ್ಯಗಳೇ ನಿರ್ಧರಿಸಲಿ ಎಂಬ ಸಲಹೆಯನ್ನೂ ನೀಡಿದೆ.
ಫೇಲಾದ್ರೆ ಅವಕಾಶ ಇಲ್ಲವೇ?:ನೋ ಡಿಟೆನ್ಷನ್ ನೀತಿ ರದ್ದು ಬಳಿಕ ಫೇಲಾದ ಮಕ್ಕಳು ಇನ್ನು ಮುಂದೆ ಶಿಕ್ಷಣ ವಂಚಿರಾಗಬೇಕೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಸರ್ಕಾರ, ಸೂಚಿತ ತರಗತಿಗಳ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಆದರೆ, ಅವರಿಗೆ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು. ಎರಡು ತಿಂಗಳಲ್ಲಿ ಅವರು ಪರೀಕ್ಷೆಗೆ ಸಿದ್ಧರಾಗಬೇಕು ಎಂದಿದೆ.
ಹಾಗೊಂದು ವೇಳೆ, ಮರು ಪರೀಕ್ಷೆಯಲ್ಲೂ ನಪಾಸಾದರೆ, ಅವರನ್ನು ಮುಂದಿನ ಹಂತಕ್ಕೆ ತೇರ್ಗಡೆ ಮಾಡುವಂತಿಲ್ಲ. ಅದೇ ತರಗತಿಗೆ ಅವರನ್ನು ಮರಳಿ ದಾಖಲಾತಿ ಪಡೆದುಕೊಂಡು ಶಿಕ್ಷಣ ನೀಡಬೇಕು ಎಂದು ಹೇಳಿದೆ. ಯಾವುದೇ ಮಕ್ಕಳು ಫೇಲ್ ಆದ ಕಾರಣಕ್ಕಾಗಿ ಶಾಲೆಯಿಂದ ಹೊರಗುಳಿಯದಂತೆಯೂ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
ಹಿಂದಿನ ನಿಯಮವೇನು?: 2019ರ ಶಿಕ್ಷಣ ಹಕ್ಕು ತಿದ್ದುಪಡಿ ಕಾಯಿದೆಯ (ಆರ್‌ಟಿಇ) ಪ್ರಕಾರ ಈ ನಿಯಮವನ್ನು ರದ್ದು ಮಾಡಿ, ನಪಾಸಾದ ಮಕ್ಕಳನ್ನೂ ಮುಂದಿನ ಹಂತಕ್ಕೆ ತೇರ್ಗಡೆ ಮಾಡಲಾಗುತ್ತಿತ್ತು. ಇದು ಶೈಕ್ಷಣಿಕ ಗುಣಮಟ್ಟ ಇಳಿಮುಖಕ್ಕೆ ಕಾರಣವಾಗಿತ್ತು.
ಆರ್‌ಟಿಇ ಕಾಯಿದೆಯ ಬಳಿಕವೂ 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ನೋ ಡೆಟೆನ್ಷನ್ ನೀತಿಯನ್ನು ರದ್ದು ಮಾಡಿವೆ. ಹರಿಯಾಣ ಮತ್ತು ಪುದುಚೇರಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ನೀತಿಯನ್ನು ಅನುಸರಿಸಲು ನಿರ್ಧರಿಸಿವೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಅಕ್ರಮವಾಗಿ ಐಎಎಸ್ ಹುದ್ದೆ ಪಡೆದ ಪೂಜಾ ಖೇಡ್ಕರ್ಗೆ ನಿರೀಕ್ಷಣಾ ಜಾಮೀನಿಲ್ಲ; ಯಾವುದೇ ಕ್ಷಣದಲ್ಲೂ ಬಂಧನ ಸಾಧ್ಯತೆ