ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಫೆಬ್ರವರಿ 1, 2024 ರಂದು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ) ನಿರ್ಮಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದವು. ಉದ್ದೇಶಿತ ಕಾರಿಡಾರ್ ಮಾರ್ಗವು ನೂರಾರು ವರ್ಷಗಳ ಹಿಂದೆ ಭಾರತೀಯ ಉಪಖಂಡ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವಿನ ಐತಿಹಾಸಿಕ ವ್ಯಾಪಾರ ಮಾರ್ಗವಾಗಿತ್ತು.
ಗಾಜಾದಲ್ಲಿನ ಸಂಘರ್ಷ ಮತ್ತು ಕೆಂಪು ಸಮುದ್ರ ಪ್ರದೇಶದಲ್ಲಿ ಎದುರಾಗುತ್ತಿರುವ ತೊಡಕುಗಳು ಆತಂಕ ಮೂಡಿಸಿದ್ದರೂ, ಭಾರತದ ಪ್ರಧಾನಿ ಮೋದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಈ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಈ ಉದ್ದೇಶಿತ ಕಾರಿಡಾರ್ ಆರ್ಥಿಕ ಮತ್ತು ಕಾರ್ಯತಂತ್ರದ ಗೇಮ್ ಚೇಂಜರ್ ಆಗಿದ್ದು, ವ್ಯಾಪಾರ ಹೆಚ್ಚಿಸುವ ಮತ್ತು ಹಡಗು ಪ್ರಯಾಣದ ವಿಳಂಬವನ್ನು ಕಡಿಮೆ ಮಾಡುವ ಮೂಲಕ ಸರಕುಗಳನ್ನು ತ್ವರಿತವಾಗಿ ಸಾಗಿಸುವ ಗುರಿಯನ್ನು ಹೊಂದಿದೆ. ಅಲ್ಲದೆ ಈ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಕಡಿಮೆ ಮಾಡುವುದು ಸಹ ಈ ಯೋಜನೆಯ ಮತ್ತೊಂದು ಮುಖ್ಯ ಗುರಿಯಾಗಿದೆ.
ಸೆಪ್ಟೆಂಬರ್ 2023 ರಲ್ಲಿ ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಯುರೋಪಿಯನ್ ಯೂನಿಯನ್ (ಇಯು), ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಸೌದಿ ಅರೇಬಿಯಾ, ಯುಎಇ ಮತ್ತು ಯುನೈಟೆಡ್ ಸ್ಟೇಟ್ಸ್ (ಯುಎಸ್) ಐಎಂಇಇಸಿ ರಚಿಸಲು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದವು. ಈ ದೇಶಗಳು ವಿಶ್ವದ ಜನಸಂಖ್ಯೆಯ 40% ರಷ್ಟನ್ನು ಹೊಂದಿವೆ ಮತ್ತು ಜಾಗತಿಕ ಆರ್ಥಿಕತೆಯ ಸುಮಾರು 50% ರಷ್ಟನ್ನು ಹೊಂದಿರುವ ಯುಎಇ, ಸೌದಿ ಅರೇಬಿಯಾ, ಗ್ರೀಸ್ ಮೂಲಕ ಹಾದುಹೋಗುವ ಮಾರ್ಗದೊಂದಿಗೆ ಭಾರತವನ್ನು ಯುರೋಪಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಇಸ್ರೇಲ್ ಮತ್ತು ಜೋರ್ಡಾನ್ಗಳನ್ನು ಕೂಡ ಸಂಪರ್ಕಿಸುತ್ತಿದ್ದರೂ ಆ ದೇಶಗಳು ಐಎಂಇಇಸಿ ಒಪ್ಪಂದಕ್ಕೆ ಸಹಿ ಹಾಕಲಿಲ್ಲ.
ಪ್ರಸ್ತುತ ಭಾರತ ಮತ್ತು ಯುರೋಪ್ ನಡುವಿನ ಬಹುತೇಕ ವ್ಯಾಪಾರವು ಈಜಿಪ್ಟ್ ನಿಯಂತ್ರಣದಲ್ಲಿರುವ ಸೂಯೆಜ್ ಕಾಲುವೆಯ ಮೂಲಕ ಕಡಲ ಮಾರ್ಗಗಳ ಮೂಲಕ ನಡೆಯುತ್ತಿದೆ. 4,800 ಕಿ.ಮೀ ಉದ್ದದ ಬಹು ಮಾದರಿ ಸಾರಿಗೆ ಕಾರಿಡಾರ್ ಐಎಂಇಇಸಿ ಭಾರತದ ಪಶ್ಚಿಮ ಕರಾವಳಿಯನ್ನು ಸಮುದ್ರದ ಮೂಲಕ ಯುಎಇಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಅರೇಬಿಯನ್ ಪರ್ಯಾಯ ದ್ವೀಪವನ್ನು ದಾಟಿ ಇಸ್ರೇಲ್ ಬಂದರಾದ ಹೈಫಾಗೆ ರೈಲು ಮಾರ್ಗದ ಮೂಲಕ ಜೋಡಿಸುತ್ತದೆ. ಹೈಫಾದಿಂದ ಸರಕುಗಳನ್ನು ಮತ್ತೆ ಸಮುದ್ರದ ಮೂಲಕ ಗ್ರೀಕ್ ಬಂದರಾದ ಪಿರೇಯಸ್ ಮೂಲಕ ಯುರೋಪಿಗೆ ಸಾಗಿಸಲಾಗುತ್ತದೆ. ಭಾರತದ ಮುಂದ್ರಾ, ಕಾಂಡ್ಲಾ ಮತ್ತು ಮುಂಬೈ ಬಂದರುಗಳು ಯುಎಇಯ ಫುಜೈರಾ, ಜೆಬೆಲ್ ಅಲಿ ಮತ್ತು ಅಬುಧಾಬಿ, ಸೌದಿ ಅರೇಬಿಯಾದ ದಮ್ಮಾಮ್ ಮತ್ತು ರಾಸ್ ಅಲ್ ಖೈರ್ ಬಂದರುಗಳು, ಇಸ್ರೇಲ್ ನ ಹೈಫಾ ಮತ್ತು ಫ್ರಾನ್ಸ್ ನ ಮಾರ್ಸಿಲೆ, ಇಟಲಿಯ ಮೆಸ್ಸಿನಾ ಮತ್ತು ಗ್ರೀಸ್ ನ ಪಿರೇಯಸ್ ಬಂದರುಗಳೊಂದಿಗೆ ಸಂಪರ್ಕ ಹೊಂದಲಿವೆ.
ಐಎಂಇಇಸಿ ಯೋಜನೆಯು ಪಾಕಿಸ್ತಾನದ ಮೂಲಕ ಇರಾನ್ ಮತ್ತು ಪಶ್ಚಿಮ ಏಷ್ಯಾಕ್ಕೆ ಭೂ ಪ್ರವೇಶದ ಸಮಸ್ಯೆಯಿಂದಾಗಿ ಈ ಹಿಂದೆ ಲಭ್ಯವಿರದ ಪಶ್ಚಿಮ ಏಷ್ಯಾ ಮತ್ತು ಯುರೋಪ್ ಅನ್ನು ಪ್ರವೇಶಿಸಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ. ಇದು ಮಧ್ಯಪ್ರಾಚ್ಯ ಮತ್ತು ಯುರೋಪಿಗೆ ಸಂಪರ್ಕದ ಅನ್ವೇಷಣೆಯಲ್ಲಿ ಇಸ್ಲಾಮಾಬಾದ್ ಮತ್ತು ಟೆಹ್ರಾನ್ ಸುತ್ತಲೂ ಒಂದು ಮಾರ್ಗ ಕಂಡುಕೊಳ್ಳಲು ಭಾರತಕ್ಕೆ ಅವಕಾಶ ಮಾಡಿಕೊಡುತ್ತದೆ.
ಆರ್ಥಿಕವಾಗಿ ಐಎಂಇಇಸಿಯು ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್ಗಳಿಗೆ ಸರಕುಗಳನ್ನು ರಫ್ತು ಮತ್ತು ಆಮದು ಮಾಡಿಕೊಳ್ಳಲು ಭಾರತಕ್ಕೆ ಅನುಕೂಲ ಮಾಡಿಕೊಡುತ್ತದೆ. ಹಾಗೆಯೇ ಇದು ಗ್ರೀಸ್ ಅನ್ನು ಇಟಲಿ, ಫ್ರಾನ್ಸ್, ಜರ್ಮನಿಗಳಿಗೆ ಸಂಪರ್ಕಿಸುತ್ತದೆ. ಈ ಮಾರ್ಗದಿಂದ ಭಾರತದಿಂದ ಯುರೋಪಿಗೆ ಸರಕುಗಳನ್ನು ಸಾಗಿಸುವ ಸಮಯ ಮತ್ತು ವೆಚ್ಚವು ಕ್ರಮವಾಗಿ 40% ಮತ್ತು 30% ರಷ್ಟು ಕಡಿಮೆಯಾಗಲಿದೆ. ಬಹುತೇಕ ಎಂಜಿನಿಯರಿಂಗ್ ರಫ್ತುಗಳನ್ನು ಮಧ್ಯಪ್ರಾಚ್ಯ ಮತ್ತು ಯುರೋಪಿಗೆ ಕಳುಹಿಸುವುದರಿಂದ, ಐಎಂಇಇಸಿ ಈ ರಫ್ತು ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು. ಅಲ್ಲದೆ, ಐಎಂಇಇಸಿ ಭಾರತದ ಐಟಿ ಸಂಪನ್ಮೂಲಗಳನ್ನು ಮಧ್ಯಪ್ರಾಚ್ಯ ಮತ್ತು ಯುರೋಪಿಗೆ ರಫ್ತು ಮಾಡಲು ಅನುಕೂಲ ಮಾಡಿಕೊಡುವ ಹೆಚ್ಚಿನ ಅವಕಾಶವಿದೆ.
ಐಎಂಇಇಸಿ ಉಪಕ್ರಮವು ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಅಡೆತಡೆಗಳನ್ನು ಎದುರಿಸುತ್ತಿದೆ. ಇದರಲ್ಲಿ ಪಾಲುದಾರ ದೇಶಗಳು ಹಣಕಾಸಿನ ಪೂರೈಕೆಯ ಬಗ್ಗೆ ಬದ್ಧತೆ ಪ್ರದರ್ಶಿಸಿಲ್ಲ ಮತ್ತು ಹಣಕಾಸು ಕ್ರೋಢೀಕರಣದ ಬಗ್ಗೆ ಮಾಹಿತಿ ತಿಳಿದಿಲ್ಲ. ಕೆಲ ಮಾಧ್ಯಮ ವರದಿಗಳ ಅಂದಾಜಿನ ಪ್ರಕಾರ, ಬಂದರು ಸಂಪರ್ಕಗಳು ಮತ್ತು ರೈಲ್ವೆ ಇತ್ಯಾದಿಗಳ ಅಭಿವೃದ್ಧಿಗೆ 8 ರಿಂದ 20 ಬಿಲಿಯನ್ ಡಾಲರ್ ಅಗತ್ಯವಿದೆ. ಆದರೆ ಮೊದಲ ತಿಳಿವಳಿಕಾ ಒಪ್ಪಂದವು ಒಳಗೊಂಡಿರುವ ವೆಚ್ಚಗಳ ಬಗ್ಗೆ ನಿರ್ದಿಷ್ಟವಾಗಿ ಏನೂ ಹೇಳುವುದಿಲ್ಲ. ಇದಲ್ಲದೆ, ಪಾಲುದಾರರ ನಡುವೆ ಆರ್ಥಿಕ ಹೊರೆಯನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಮಾತ್ರ ಈ ಯೋಜನೆಗಾಗಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಭರವಸೆ ನೀಡಿದ್ದಾರೆ.