ಮುಂಬೈ: ಮುಂದಿನ 5 ವರ್ಷಗಳ ಕಾಲ ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಸದಂತೆ ಅನಿಲ್ ಅಂಬಾನಿ ಮತ್ತು ಇತರ 24 ಸಂಸ್ಥೆಗಳ ಮೇಲೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಕ್ಯುರಿಟಿ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿರ್ಬಂಧ ವಿಧಿಸಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಯಾವುದೇ ಕಂಪನಿಯೊಂದಿಗೆ ವಹಿವಾಟು ನಡೆಸದಂತೆ ಅನಿಲ್ ಅಂಬಾನಿ ಅವರ ಮೇಲೆ ಸೆಬಿ ನಿರ್ಬಂಧ ಹೇರಿದೆ.
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್ಎಚ್ಎಫ್ಎಲ್)ನಿಂದ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಕ್ಕಾಗಿ ಸೆಬಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಇತರ 24 ಸಂಸ್ಥೆಗಳನ್ನು ನಿಷೇಧಿಸಿದೆ. ಅಲ್ಲದೆ ಅನಿಲ್ ಅಂಬಾನಿಗೆ 25 ಕೋಟಿ ರೂ.ಗಳ ದಂಡ ವಿಧಿಸಲಾಗಿದ್ದು, ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಅಥವಾ ಸೆಬಿಯಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಸೇರಿದಂತೆ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಸಂಬಂಧ ಹೊಂದದಂತೆ ಐದು ವರ್ಷಗಳವರೆಗೆ ನಿರ್ಬಂಧ ಹೇರಲಾಗಿದೆ.
ಇದಲ್ಲದೆ, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ಗೆ 6 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಕಂಪನಿಯನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಆರು ತಿಂಗಳ ಕಾಲ ನಿಷೇಧಿಸಲಾಗಿದೆ. 222 ಪುಟಗಳ ಆದೇಶದಲ್ಲಿ, ಅನಿಲ್ ಅಂಬಾನಿ, ಆರ್ಎಚ್ಎಫ್ಎಲ್ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯ ಸಹಾಯದಿಂದ, ಆರ್ಎಚ್ಎಫ್ಎಲ್ನಿಂದ ಹಣ ವರ್ಗಾಯಿಸಲು ಮೋಸದ ಯೋಜನೆಯನ್ನು ರೂಪಿಸಿದ್ದಾರೆ ಎಂದು ಸೆಬಿ ಹೇಳಿದೆ.
ಕಾರಣವೇನು?: "ಆರ್ಎಚ್ಎಫ್ಎಲ್ನ ನಿರ್ದೇಶಕರ ಮಂಡಳಿಯು ಅಂಥ ಸಾಲ ನೀಡುವ ಅಭ್ಯಾಸಗಳನ್ನು ನಿಲ್ಲಿಸುವಂತೆ ಕಠಿಣವಾದ ನಿರ್ದೇಶನಗಳನ್ನು ನೀಡಲಾಗಿತ್ತು ಮತ್ತು ಕಾರ್ಪೊರೇಟ್ ಸಾಲಗಳನ್ನು ನಿಯಮಿತವಾಗಿ ಪರಿಶೀಲಿಸಲಾಗಿತ್ತು. ಆದರೆ ಕಂಪನಿಯ ಆಡಳಿತ ಮಂಡಳಿಯು ಈ ಆದೇಶಗಳನ್ನು ನಿರ್ಲಕ್ಷಿಸಿದೆ. ಇದು ಅನಿಲ್ ಅಂಬಾನಿಯವರ ಕುಮ್ಮಕ್ಕಿನಿಂದ ಕೆಲ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯ ಕೆಲಸವಾಗಿದ್ದು, ಆಡಳಿತದ ಗಮನಾರ್ಹ ವೈಫಲ್ಯವನ್ನು ಸೂಚಿಸುತ್ತದೆ" ಎಂದು ಸೆಬಿ ಹೇಳಿದೆ.
"ನೋಟಿಸ್ ನೀಡಲಾದ 2 ನೇ ಸಂಖ್ಯೆಯ ವ್ಯಕ್ತಿಯು (ಅನಿಲ್ ಅಂಬಾನಿ) ವಂಚನೆಯ ಯೋಜನೆಯನ್ನು ರೂಪಿಸಿದ್ದಾರೆ ಮತ್ತು ಆರ್ಎಚ್ಎಫ್ಎಲ್ನ ಕೆಎಂಪಿಗಳು ವಂಚನೆಯ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಹಾಗೂ ಈ ಮೂಲಕ ಷೇರು ಮಾರುಕಟ್ಟೆಯಲ್ಲಿ ಲಿಸ್ಟೆಡ್ ಆಗಿರುವ ಆರ್ಎಚ್ಎಫ್ಎಲ್ನಿಂದ ಸಾಲ ಪಡೆಯಲು ಅನರ್ಹವಾದ ಕಂಪನಿಗಳಿಗೆ ಸಾಲ ನೀಡಲಾಗಿದೆ. ಆದರೆ ಈ ಕಂಪನಿಗಳೆಲ್ಲವೂ ಪ್ರವರ್ತಕ ಅಂದರೆ ಅನಿಲ್ ಅಂಬಾನಿಯವರಿಗೇ ಸಂಬಂಧ ಹೊಂದಿದ ಕಂಪನಿಗಳಾಗಿರುವುದು ಕಂಡು ಬಂದಿದೆ" ಎಂದು ಸೆಬಿ ಹೇಳಿದೆ.
ಆರ್ಎಚ್ಎಫ್ಎಲ್ನ ಮಾಜಿ ಪ್ರಮುಖ ಅಧಿಕಾರಿಗಳಾದ ಅಮಿತ್ ಬಾಪ್ನಾ, ರವೀಂದ್ರ ಸುಧಾಲ್ಕರ್ ಮತ್ತು ಪಿಂಕೇಶ್ ಆರ್ ಶಾ ಸೇರಿದಂತೆ ಇತರರಿಗೆ ಸೇರಿದ 24 ಸಂಸ್ಥೆಗಳನ್ನು ನಿಷೇಧಿಸಲಾಗಿದೆ. ಬಾಪ್ನಾಗೆ 27 ಕೋಟಿ ರೂ., ಸುಧಾಲ್ಕರ್ ಗೆ 26 ಕೋಟಿ ರೂ., ಶಾ ಅವರಿಗೆ 21 ಕೋಟಿ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ : ಆನ್ಲೈನ್ ಇ-ಕಾಮರ್ಸ್ ಕಂಪನಿಗಳಿಂದ 1.6 ಕೋಟಿ ಉದ್ಯೋಗ ಸೃಷ್ಟಿ: ಪಹ್ಲೆ ಇಂಡಿಯಾ ವರದಿ - Online E Commerce