ನವದೆಹಲಿ : ಭಾರತದ ಸಣ್ಣ ನಗರಗಳಲ್ಲಿನ ಶೇ 65ರಷ್ಟು ಗ್ರಾಹಕರು ತಮ್ಮ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿಯೇ ನಡೆಸುತ್ತಿದ್ದಾರೆ ಎಂದು ಹೊಸ ವರದಿಯೊಂದು ಮಂಗಳವಾರ ತಿಳಿಸಿದೆ. ದೊಡ್ಡ ನಗರಗಳಲ್ಲಿ ಈ ಪ್ರಮಾಣ ಶೇ 75ರಷ್ಟಿದೆ. ಕೀರ್ನಿ ಇಂಡಿಯಾ ಮತ್ತು ಅಮೆಜಾನ್ ಪೇ ಇಂಡಿಯಾದ ವರದಿಯ ಪ್ರಕಾರ, ಭಾರತದ ಸಹಸ್ರಮಾನದ ಯುವಕರು ಅಂದರೆ 25 ರಿಂದ 43 ವರ್ಷ ವಯಸ್ಸಿನವರು ಮತ್ತು ಜೆನ್ ಎಕ್ಸ್ ಪೀಳಿಗೆಯವರು ಅಂದರೆ 44 ರಿಂದ 59 ವರ್ಷ ವಯಸ್ಸಿನವರು ಅತ್ಯಧಿಕವಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುತ್ತಿದ್ದಾರೆ. ಬೂಮರ್ಗಳು ಅಂದರೆ 60 ವರ್ಷ ಮತ್ತು ಮೇಲ್ಪಟ್ಟವರು ಕೂಡ ತಮ್ಮ ಕಿರಿಯರಿಗಿಂತ ಹೆಚ್ಚು ಕಾರ್ಡ್ ಮತ್ತು ವ್ಯಾಲೆಟ್ಗಳ ಬಳಕೆ ಮಾಡುತ್ತಿದ್ದಾರೆ.
"ಆನ್ಲೈನ್ ಮತ್ತು ಆಫ್ಲೈನ್ ವಹಿವಾಟುಗಳಲ್ಲಿ ಡಿಜಿಟಲ್ ಪಾವತಿಗಳನ್ನು ವ್ಯಾಪಕವಾಗಿ ಬಳಸುವುದರಿಂದ ಹಿಡಿದು ಬಿಎನ್ಪಿಎಲ್ (buy now, pay later - ಈಗ ಖರೀದಿಸಿ, ನಂತರ ಪಾವತಿಸಿ) ನಂತಹ ಹೊಸ ಮಾದರಿಯ ಪಾವತಿ ವಿಧಾನಗಳವರೆಗೆ ಈ ವರದಿಯು ಭಾರತದ ಪಾವತಿ ವ್ಯವಸ್ಥೆಯಲ್ಲಿನ ಕ್ರಾಂತಿಕಾರಿ ಬದಲಾವಣೆಯ ಬಗ್ಗೆ ವಿವರವಾದ ನೋಟವನ್ನು ನೀಡುತ್ತದೆ" ಎಂದು ಕೀರ್ನಿ ಇಂಡಿಯಾದ ಹಣಕಾಸು ಸೇವೆಗಳ ಲೀಡ್ ಪಾಲುದಾರ ಶಾಶ್ವತ್ ಶರ್ಮಾ ಹೇಳಿದರು.
120 ನಗರಗಳು, 6,000 ಕ್ಕೂ ಹೆಚ್ಚು ಗ್ರಾಹಕರು ಮತ್ತು 1,000 ವ್ಯಾಪಾರಿಗಳನ್ನು ಒಳಗೊಂಡ ಸಮೀಕ್ಷೆ ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ವರದಿಯ ಪ್ರಕಾರ ನಗದು ವಹಿವಾಟುಗಳು ಕಡಿಮೆಯಾಗುತ್ತಿರುವ ಮಧ್ಯೆ ಯುಪಿಐ, ಡಿಜಿಟಲ್ ವ್ಯಾಲೆಟ್ಗಳು ಮತ್ತು ಕಾರ್ಡ್ಗಳು ವ್ಯಾಪಕ ಆಕರ್ಷಣೆ ಪಡೆದುಕೊಳ್ಳುತ್ತಿವೆ. ವ್ಯಾಪಾರ ವಹಿವಾಟುಗಳಲ್ಲಿ ಒಟ್ಟಾರೆ ಡಿಜಿಟಲ್ ವಹಿವಾಟಿನ ಪ್ರಮಾಣ ಶೇಕಡಾ 69 ರಷ್ಟಿದೆ.