ನಾಯಗಢ(ಒಡಿಶಾ): ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಸ್ವಂತ ಗಂಡನನ್ನೇ ಕೊಲೆಗೈದು, ಮೃತದೇಹವನ್ನು ಮನೆಯಲ್ಲೇ ಹೂತು ಹಾಕಿದ ಘಟನೆ ಒಡಿಶಾದ ನಾಯಗಢ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದಿಂದಲೇ ಈ ದುಷ್ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕಾಶ್ ನಾಯಕ್ ಎಂಬಾತ ಹತ್ಯೆಗೀಡಾದ ವ್ಯಕ್ತಿ. ಈತನ ಪತ್ನಿ ಜ್ಯೋತ್ನಾರಾಣಿ ಮತ್ತು ಪ್ರಿಯಕರ ಸೋನು ಸಮಾಲ್ ಕೊಲೆ ಆರೋಪಿಗಳು. ಪ್ರಕಾಶ್ ಮತ್ತು ಜ್ಯೋತ್ನಾ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ, ಸೋನು ಜೊತೆಗೆ ಜ್ಯೋತ್ನಾ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ಮಾಡಿ ನಾಪತ್ತೆ ನಾಟಕ:ಇಲ್ಲಿನ ಒಡಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಕೋಮಂಡಾ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಕೋಮಂಡಾ ಗ್ರಾಮವು ಜ್ಯೋತ್ನಾರಾಣಿ ತವರೂರು ಇಲ್ಲಿಯೇ ದಂಪತಿ ವಾಸವಾಗಿದ್ದರು. ಆದರೆ, ಅನೈತಿಕ ಸಂಬಂಧದ ಕಾರಣದಿಂದ ಪ್ರಕಾಶ್ನನ್ನು ಕೊಲೆ ಮಾಡಲು ಪತ್ನಿ ನಿರ್ಧರಿಸಿದ್ದಳು.20 ದಿನಗಳ ಹಿಂದೆ ಪ್ರಿಯಕರನ ಜೊತೆಗೂಡಿ ಸಂಚು ರೂಪಿಸಿ ಮನೆಯಲ್ಲಿ ಈ ಕೊಲೆ ಮಾಡಲಾಗಿದೆ. ನಂತರ ಶವವನ್ನು ಹೊರಗಡೆ ಸಾಗಿಸದೇ ಮನೆಯಲ್ಲೇ ಹೂತು ಹಾಕಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.