ಪಣಜಿ(ಗೋವಾ):ನದಿ ನೀರು ತಿರುವು ವಿವಾದದ ನಡುವೆ 'ಪ್ರವಾಹ್' ನದಿ ಪ್ರಾಧಿಕಾರ ಇಂದಿನಿಂದ ಮೂರು ದಿನಗಳ ಕಾಲ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅಧಿಕಾರಿಗಳ ಸಮ್ಮುಖದಲ್ಲಿ ಮಹದಾಯಿ ಜಲಾನಯನ ಪ್ರದೇಶಗಳ ಪರಿಶೀಲನೆ ನಡೆಸಲಿದೆ ಎಂದು ಗೋವಾ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ತಿಳಿಸಿದ್ದಾರೆ.
ಮಹದಾಯಿ ಜಲ ವಿವಾದಗಳ ನ್ಯಾಯಾಧಿಕರಣದ ಆದೇಶ ಮತ್ತು ತೀರ್ಪುಗಳ ಅನುಸರಣೆ ಮತ್ತು ಅನುಷ್ಠಾನವನ್ನು ಸಕ್ರಿಯಗೊಳಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರವನ್ನು (Progressive River Authority for Welfare & Harmony - PRAWAH) ರಚಿಸಿದೆ. ನದಿ ನೀರನ್ನು ತಿರುಗಿಸಲು ಕರ್ನಾಟಕಕ್ಕೆ ಅನುಮತಿ ನೀಡಿದರೆ ಉಂಟಾಗುವ ಪರಿಣಾಮಗಳನ್ನು ಪರಿಶೀಲಿಸಲು ಜಲಪಾತಗಳು ಮತ್ತು ಅಣೆಕಟ್ಟುಗಳು ಸೇರಿದಂತೆ ಎಲ್ಲ ಪ್ರದೇಶಗಳಿಗೆ ಪ್ರವಾಹ್ ಸಮಿತಿ ಸದಸ್ಯರು ಭೇಟಿ ನೀಡಲಿದ್ದಾರೆ ಎಂದು ಶಿರೋಡ್ಕರ್ ಮಾಹಿತಿ ನೀಡಿದರು.
''ಜುಲೈ 4ರಿಂದ 6ರವರೆಗೆ ನಡೆಯಲಿರುವ ಈ ಪರಿಶೀಲನೆಯಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅಧಿಕಾರಿಗಳು 'ಪ್ರವಾಹ್' ಸದಸ್ಯರೊಂದಿಗೆ ಇರಲಿದ್ದಾರೆ. ಪ್ರಸಿದ್ಧ ಸುರ್ಲಾ ಜಲಪಾತ (ಕರ್ನಾಟಕದ ಗಡಿಯಲ್ಲಿದೆ) ಸೇರಿದಂತೆ ಗೋವಾದ ಜಲಸಂಪನ್ಮೂಲಗಳು ನೀರನ್ನು ತಿರುಗಿಸಿದರೆ ಹೇಗೆ ಒಣಗುತ್ತವೆ ಎಂಬುದನ್ನು ನಾವು ಪ್ರಾಧಿಕಾರದ ಸದಸ್ಯರಿಗೆ ತಿಳಿಸಲಿದ್ದೇವೆ'' ಎಂದು ಸಚಿವರು ಹೇಳಿದರು.