ನವದೆಹಲಿ: ಲಂಚ ಸ್ವೀಕಾರ ಆರೋಪ ಪ್ರಕರಣದಲ್ಲಿ ಉತ್ತರ ಪ್ರದೇಶದ ಆಗ್ರಾದ ಪ್ರಧಾನ ಅಂಚೆ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಹಿರಿಯ ಪೋಸ್ಟ್ ಮಾಸ್ಟರ್ ಮತ್ತು ಸಾರ್ವಜನಿಕ ಸಂಪರ್ಕ ನಿರೀಕ್ಷಕನನ್ನು ಕೇಂದ್ರಿಯ ತನಿಖಾ ದಳ (ಸಿಬಿಐ) ಬಂಧಿಸಿದೆ. ದೇವೇಂದ್ರ ಕುಮಾರ್, ರಾಜೀವ್ ದುಬೆ ಎಂಬುವವರೇ ಬಂಧಿತ ಅಧಿಕಾರಿಗಳು ಎಂದು ಗುರುತಿಸಲಾಗಿದೆ.
ದೇವೇಂದ್ರ ಕುಮಾರ್ ಹಿರಿಯ ಪೋಸ್ಟ್ ಮಾಸ್ಟರ್ ಆಗಿದ್ದು, ರಾಜೀವ್ ದುಬೆ ಸಾರ್ವಜನಿಕ ಸಂಪರ್ಕ ನಿರೀಕ್ಷಕನಾಗಿದ್ದರೆ. 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಬಂಧ ನೌಕರರೊಬ್ಬರು ನೀಡಿದ ದೂರಿನ ಮೇಲೆ ಶುಕ್ರವಾರ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನ ಸಂಪೂರ್ಣ ವಿವರ: ದೂರುದಾರರ ವಿರುದ್ಧ ಇಲಾಖಾ ಪ್ರಕ್ರಿಯೆ ಬಾಕಿ ಇದೆ ಎನ್ನಲಾಗಿದೆ. ಇದರ ನಡುವೆ ಏಪ್ರಿಲ್ 25ರಂದು ಆಗ್ರಾ ವಿಭಾಗದ ಹಿರಿಯ ಅಂಚೆ ಕಚೇರಿಯ ಆದೇಶದ ಮೇರೆಗೆ ಆಗ್ರಾದ ಪ್ರಧಾನ ಅಂಚೆ ಕಚೇರಿಯಿಂದ ಆಗ್ರಾದ ಫೋರ್ಟ್ ಪ್ರಧಾನ ಕಚೇರಿಗೆ ಆತನ್ನು ಇತ್ತೀಚೆಗೆ ವರ್ಗಾಯಿಸಲಾಗಿತ್ತು. ಆದರೆ, ದೂರುದಾರರ ವಿರುದ್ಧ ಬಾಕಿ ಉಳಿದಿರುವ ಇಲಾಖಾ ಪ್ರಕ್ರಿಯೆಯಲ್ಲಿ ಅನುಕೂಲಕರವಾದ ವರದಿ ನೀಡಿದ ಕಾರಣಕ್ಕೆ ಸಾರ್ವಜನಿಕ ಸಂಪರ್ಕ ನಿರೀಕ್ಷಕನ ಮೂಲಕ 1 ಲಕ್ಷ ರೂಪಾಯಿಗಳನ್ನು ನೀಡುವಂತೆ ಆರೋಪಿ ಹಿರಿಯ ಪೋಸ್ಟ್ ಮಾಸ್ಟರ್ ಬೇಡಿಕೆಯಿಟ್ಟಿದ್ದ ಎಂದು ತನಿಖಾಧಿಕಾರಿಗಳು ನೀಡಿದ್ದಾರೆ.