ಹೈದರಾಬಾದ್ :ಪ್ರಸಕ್ತ ವರ್ಷದ ಜುಲೈ 25ರವರೆಗೆ ತೆಲಂಗಾಣ ಪೊಲೀಸರು 21,193 ಕದ್ದ ಅಥವಾ ಕಳೆದುಹೋದ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಜಿತೇಂದರ್ ಭಾನುವಾರ ತಿಳಿಸಿದ್ದಾರೆ. ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ತೆಲಂಗಾಣ ಪೊಲೀಸರು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಎಂದು ಅವರು ಹೇಳಿದರು.
"ತೆಲಂಗಾಣದ ಎಲ್ಲಾ 780 ಪೊಲೀಸ್ ಠಾಣೆಗಳಲ್ಲಿ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಐಇಆರ್) ಪೋರ್ಟಲ್ ಅನ್ನು ನಿರ್ವಹಿಸಲಾಗುತ್ತಿದೆ. 2024 ರಲ್ಲಿ 206 ದಿನಗಳ ಅವಧಿಯಲ್ಲಿ ಒಟ್ಟು 21,193 ಕಳೆದುಹೋದ ಅಥವಾ ಕದ್ದ ಮೊಬೈಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 1000 ಮೊಬೈಲ್ ಫೋನ್ಗಳನ್ನು ಕಳೆದ ಎಂಟು ದಿನಗಳಲ್ಲಿಯೇ ವಶಪಡಿಸಿಕೊಳ್ಳಲಾಗಿದೆ ಮತ್ತು ದೂರುದಾರರಿಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ದಿನಕ್ಕೆ ಸರಾಸರಿ 82 ಇಂಥ ಮೊಬೈಲ್ಗಳನ್ನು ಪತ್ತೆ ಮಾಡಲಾಗುತ್ತಿದೆ. ಈ ಪ್ರಮಾಣ ಏಪ್ರಿಲ್ 2024 ರಲ್ಲಿ ದಿನಕ್ಕೆ 73 ಆಗಿತ್ತು" ಎಂದು ಅವರು ಮಾಹಿತಿ ನೀಡಿದರು.
ಮೊಬೈಲ್ ಕಳ್ಳತನ ಮತ್ತು ನಕಲಿ ಮೊಬೈಲ್ ಸಾಧನಗಳ ಹಾವಳಿಯನ್ನು ತಡೆಯಲು ದೂರಸಂಪರ್ಕ ಇಲಾಖೆ (ಡಿಒಟಿ) ಸಿಐಇಆರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ಅನ್ನು ಅಧಿಕೃತವಾಗಿ ಮೇ 17, 2023 ರಂದು ರಾಷ್ಟ್ರವ್ಯಾಪಿ ಪ್ರಾರಂಭಿಸಲಾಯಿತು ಮತ್ತು ಏಪ್ರಿಲ್ 19, 2023 ರಂದು ತೆಲಂಗಾಣದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾಯಿತು.