ಲಕ್ನೋ (ಉತ್ತರ ಪ್ರದೇಶ): ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರ ಪ್ರದೇಶ ಪ್ರವೇಶಿಸಿದ್ದು ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಸೂತ್ರ ಅಂತಿಮಗೊಳ್ಳುವವರೆಗೆ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಇದಕ್ಕೆ ಪರಿಹಾರ ಕಂಡುಕೊಂಡ ಬಳಿಕವಷ್ಟೇ ಯಾತ್ರೆಯಲ್ಲಿ ಪಾಲ್ಗೊಳ್ಳಲಾಗುತ್ತದೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಈ ಷರತ್ತುಗಳ ಬಗ್ಗೆ ಪಕ್ಷ ಖಚಿತಪಡಿಸಿದೆ. ''ಮುಂಬರುವ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 15 ಸ್ಥಾನಗಳನ್ನು ನೀಡುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಸೀಟು ಹಂಚಿಕೆಯ ಮಾತುಕತೆ ಅಂತಿಮಗೊಂಡ ನಂತರವಷ್ಟೇ ಸಮಾಜವಾದಿ ಪಕ್ಷವು ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ. ಅಮೇಥಿಯಲ್ಲಿ ನಡೆಯುವ ಯಾತ್ರೆಯ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಜರಾಗಬಾರದು ಎಂಬ ಸೂಚನೆ ನೀಡಲಾಗಿದೆ'' ಎಂದು ಪಕ್ಷ ತಿಳಿಸಿದೆ.
"ಸೀಟು ಹಂಚಿಕೆ ಕುರಿತು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ಈಗಾಗಲೇ ಮಾತುಕತೆ ನಡೆದಿದೆ. ಅಭ್ಯರ್ಥಿಗಳ ಪಟ್ಟಿಯೊಂದಿಗೆ ಪ್ರತಿ ಹಂತದಲ್ಲೂ ಒನ್ ಟು ಒನ್ ಮಾತುಕತೆ ನಡೆಸಲಾಗುವುದು. ಶೀಘ್ರದಲ್ಲೇ ಸೀಟು ಹಂಚಿಕೆ ಬಗ್ಗೆಗೂ ಚರ್ಚೆ ನಡೆಯಲಿದೆ ಎಂಬ ವಿಶ್ವಾಸ ಇದೆ. ಇದಾದ ನಂತರ ಸಮಾಜವಾದಿ ಪಕ್ಷವು ಕಾಂಗ್ರೆಸ್ ನ್ಯಾಯ ಯಾತ್ರೆಗೆ ಸೇರುತ್ತದೆ" ಎಂದು ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ.