ಬಾರಾಬಂಕಿ(ಉತ್ತರ ಪ್ರದೇಶ): ಶಾಲಾ ಬಸ್ವೊಂದು ಪಲ್ಟಿಯಾದ ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. 25 ಮಕ್ಕಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಸೂರತ್ಗಂಜ್ ಪ್ರದೇಶದ ಸರ್ಕಾರಿ ಶಾಲೆಗೆ ಸೇರಿದ ಮಕ್ಕಳು ಇಂದು ಬೆಳಗ್ಗೆ ಲಖನೌ ಮೃಗಾಲಯ ಸೇರಿ ಇತರ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಸಂಜೆ ಮರಳಿ ಬರುತ್ತಿದ್ದಾಗ ದೇವ ಕೋತ್ವಾಲಿ ಪ್ರದೇಶದಲ್ಲಿ ಬಸ್ ಅಪಘಾತಕ್ಕೀಡಾಗಿದೆ. ಬಸ್ನಲ್ಲಿ ಸುಮಾರು 45 ಮಕ್ಕಳೊಂದಿಗೆ ಐವರು ಶಿಕ್ಷಕರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಮುಂದೆ ಏಕಾಏಕಿ ಬೈಕ್ ಬಂದಿದೆ. ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಯತ್ನಿಸಿದ್ದಾನೆ. ಇದರಿಂದ ಬಸ್ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದು ಪಲ್ಟಿಯಾಗಿದೆ. ನಾಲ್ವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಪಘಾತದ ವಿಷಯ ತಿಳಿದ ತಕ್ಷಣವೇ ಬಾರಾಬಂಕಿ ಜಿಲ್ಲಾಡಳಿತ ಅಧಿಕಾರಿಗಳೊಂದಿಗೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. 'ಬಾರಾಬಂಕಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಕ್ಕಳ ಸಾವು ತುಂಬಾ ದುಃಖ ಉಂಟುಮಾಡಿದೆ. ಅಗಲಿದ ಮಕ್ಕಳ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭಗವಾನ್ ಶ್ರೀರಾಮನು ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ಗಾಯಗೊಂಡ ಮಕ್ಕಳು ಶೀಘ್ರವಾಗಿ ಚೇತರಿಸಿಕೊಳ್ಳಲಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಆಟೋಗೆ ಟ್ರಕ್ ಡಿಕ್ಕಿ:ಉತ್ತರ ಪ್ರದೇಶದಲ್ಲೇ ನಡೆದ ಮತ್ತೊಂದು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಐವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸತ್ನಾ ಜಿಲ್ಲೆಯ ಚಿತ್ರಕೂಟದ ಬಳಿ ಆಟೋಗೆ ಟ್ರಕ್ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಮೃತರನ್ನು ಕನೌಜ್ ಜಿಲ್ಲೆಯ ಅನಿರುದ್ಧ್ (30), ಅತಾರ್ ಸಿಂಗ್ (50), ಅಖಿಲೇಶ್ ಸಿಂಗ್ (22), ಹಮೀರ್‌ಪುರ ಜಿಲ್ಲೆಯ ಧರ್ಮೇಂದ್ರ ಸೋನಿ (30) ಮತ್ತು ನಿಧಿ ಸೋನಿ (19) ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಕಾರ್ವಿ ರೈಲು ನಿಲ್ದಾಣದಿಂದ ರಾಮಘಾಟ್‌ಗೆ ತೆರಳುತ್ತಿದ್ದರು. ಈ ವೇಳೆ, ಕಪ್ಸೇತಿ ಗ್ರಾಮದ ಬಳಿ ಆಟೋ ಮತ್ತು ಟ್ರಕ್ ಅಪಘಾತ ಜರುಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಚಿತ್ರಕೂಟದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಕ್ರಪಾಣಿ ತ್ರಿಪಾಠಿ ತಿಳಿಸಿದ್ದಾರೆ.
ಇದನ್ನೂ ಓದಿ:ಅಸ್ಸೋಂನಲ್ಲಿ ಮಳೆ ಅಬ್ಬರಕ್ಕೆ 4 ಜನರು ಸಾವು: ಎಎಸ್‌ಡಿಎಂಎ