ಲಕ್ನೋ(ಉತ್ತರ ಪ್ರದೇಶ):ಸಂಭಾಲ್ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾದ ನಷ್ಟದ ಪರಿಹಾರವನ್ನು ಪ್ರತಿಭಟನಾಕಾರರಿಂದಲೇ ವಸೂಲು ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಹಿಂಸಾಚಾರದಲ್ಲಿ ಕಲ್ಲು ತೂರಾಟ ನಡೆಸಿ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರತಿಭಟನಾಕಾರರ ಫೋಟೊಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಘರ್ಷಣೆ ನಡೆದಿದ್ದೇಕೆ?: ನ್ಯಾಯಾಲಯದ ಆದೇಶದ ಮೇರೆಗೆ ನಗರದ ಕೋಟ್ ಗರ್ವಿ ಪ್ರದೇಶದ ಶಾಹಿ ಜಾಮಾ ಮಸೀದಿಯ ಸರ್ವೇ ಕಾರ್ಯ ನಡೆಸುತ್ತಿರುವ ಸಂದರ್ಭದಲ್ಲಿ ಭಾನುವಾರ ಭುಗಿಲೆದ್ದ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ ಹಲವಾರು ಜನ ಗಾಯಗೊಂಡಿದ್ದಾರೆ.
ಯೋಗಿ ಸರ್ಕಾರದಿಂದ ಕಠಿಣ ಕ್ರಮ: "ಸಂಭಾಲ್ ಹಿಂಸಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಯುಪಿ ಸರ್ಕಾರ ಕಠಿಣ ನಿಲುವು ತಳೆದಿದೆ. ಕಲ್ಲು ತೂರಾಟಗಾರರು ಮತ್ತು ದುಷ್ಕರ್ಮಿಗಳ ಪೋಸ್ಟರ್ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು ಮತ್ತು ನಷ್ಟದ ಪರಿಹಾರವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. ಪ್ರತಿಭಟನಾಕಾರರನ್ನು ಬಂಧಿಸಲು ಸಹಾಯಕವಾಗುವಂಥ ಮಾಹಿತಿ ನೀಡಿದವರಿಗೆ ಬಹುಮಾನವನ್ನು ಸಹ ಘೋಷಿಸಬಹುದು" ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಈ ಹಿಂದೆ 2020ರಲ್ಲಿ ಕೂಡ ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಉತ್ತರ ಪ್ರದೇಶ ಸರ್ಕಾರ ಪ್ರತಿಭಟನಾಕಾರರ ಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿತ್ತು. ರಾಜ್ಯ ರಾಜಧಾನಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ದುಷ್ಕರ್ಮಿಗಳ ಪೋಸ್ಟರ್ಗಳನ್ನು ಸರ್ಕಾರ ಪ್ರದರ್ಶಿಸಿತ್ತು. ಆದರೆ ನ್ಯಾಯಾಲಯದ ಆದೇಶದ ನಂತರ ಇವನ್ನು ತೆಗೆದುಹಾಕಲಾಗಿತ್ತು.