ಕೋಲ್ಕತ್ತಾ: ಹಲವು ಸುತ್ತಿನ ವಿಫಲ ಸಭೆಗಳ ಬಳಿಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮತ್ತೊಮ್ಮೆ ಪ್ರತಿಭಟನಾನಿರತ ಕಿರಿಯ ವೈದ್ಯರೊಂದಿಗೆ ಸಭೆಗೆ ಮುಂದಾಗಿದ್ದಾರೆ. ಆರ್.ಜಿ.ಕರ್ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇದೀಗ ಐದನೇ ಹಾಗೂ ಕಡೇಯ ಬಾರಿಗೆ ಪ್ರತಿಭಟನೆ ನಡೆಸುತ್ತಿರುವ ವೈದ್ಯರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ (ಶನಿವಾರ) ನಡೆಸಲು ಉದ್ದೇಶಿಸಿದ್ದ ಮಾತುಕತೆಯನ್ನು ನೇರಪ್ರಸಾರ ಮಾಡುವಂತೆ ವೈದ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅದು ವಿಫಲವಾಗಿತ್ತು.
ಇದೀಗ ವೈದ್ಯರಿಗೆ ಇಮೇಲ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜಕ್ ಪಂತ್ ಅವರು ಸಂದೇಶ ರವಾನಿಸಿದ್ದು, ಮುಖ್ಯಮಂತ್ರಿಗಳ ಕಾಳಿಘಾಟ್‌ನಲ್ಲಿರುವ ನಿವಾಸದಲ್ಲಿ ಇಂದು ಸಂಜೆ 5ಕ್ಕೆ ಸಭೆಗೆ ಬರುವಂತೆ ತಿಳಿಸಿದ್ದಾರೆ.
ಆರ್.ಜಿ.ಕರ್ ಕಿರಿಯ ವೈದ್ಯೆ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ನಿರಂತರ ಪ್ರತಿಭಟನೆ ನಡೆಸುತ್ತಿರುವ ವೈದ್ಯರಿಗೆ ಹೋರಾಟ ಕೈ ಬಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ನಡೆಸುತ್ತಿರುವ ಐದನೇ ಮತ್ತು ಅಂತಿಮ ಕರೆ ಇದು. ಮತ್ತೊಮ್ಮೆ ನಾವು ನಿಮ್ಮನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದು, ಮುಕ್ತ ಮನಸ್ಸಿನಿಂದ ಸಿಎಂ ನಿವಾಸದಲ್ಲಿ ಚರ್ಚೆಗೆ ಬನ್ನಿ ತಿಳಿಸಲಾಗಿದೆ.