ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯ ರಾಮಮಂದಿರದಲ್ಲಿ ಇಂದು ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದೆ. ಆದರೆ, ಈ ಮಂದಿರದ ನಿರ್ಮಾಣದ ಹಿಂದೆ ಅನೇಕರ ತ್ಯಾಗ, ಸವಾಲುಗಳು ಮತ್ತು ರಾಜಕೀಯ ಬೆಳವಣಿಗೆಗಳು ನಡೆದಿವೆ. ರಾಮಮಂದಿರ ನಿರ್ಮಾಣಕ್ಕೆ ರಾಮಭಕ್ತರು, ವಿವಿಧ ಹಿಂದೂ ಸಂಘಟನೆಗಳು, ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ನಾಯಕರು ಮಾತ್ರವಲ್ಲದೆ, ಸರ್ಕಾರಿ ಸೇವೆಯಲ್ಲಿದ್ದ ಅಧಿಕಾರಿಗಳ ಸಹಕಾರವೂ ಇದೆ.
ಹೌದು, 1949 ಡಿಸೆಂಬರ್ 23ರ ರಾತ್ರಿ ಫೈಜಾಬಾದ್ (ಅಯೋಧ್ಯೆ)ಯ ಬಾಬ್ರಿ ಮಸೀದಿಯೊಳಗೆ ರಾಮಲಲ್ಲಾ ಮೂರ್ತಿ ಪತ್ತೆಯಾಗಿತ್ತು. ಆಗ ಕೆ ಕೆ ನಾಯರ್ ಅವರು ಅಲ್ಲಿನ ಜಿಲ್ಲಾಧಿಕಾರಿ ಆಗಿದ್ದರು. ರಾಮಲಲ್ಲಾ ಮೂರ್ತಿ ಸಿಕ್ಕ ಬಳಿಕ ರಾಜಕೀಯವಾಗಿ ಸಾಕಷ್ಟು ಕೋಲಾಹಲ ಉಂಟಾಯಿತು. ಈ ಹಿನ್ನೆಲೆ ಅಂದಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಉತ್ತರ ಪ್ರದೇಶ ಸಿಎಂ ಗೋವಿಂದ ಬಲ್ಲಭ್ ಪಂತ್ ಅವರಿಗೆ ಮೂರ್ತಿಯನ್ನು ಅಲ್ಲಿಂದ ತೆರವು ಮಾಡುವಂತೆ ಸೂಚಿಸಿದ್ದರು. ಅದರಂತೆ ರಾಜ್ಯ ಸರ್ಕಾರ ಮೂರ್ತಿ ತೆರವು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಆದರೆ ಸಾರ್ವಜನಿಕರ ಭಾವನೆಗಳನ್ನು ಗೌರವಿಸಿ ಅಂದಿನ ಜಿಲ್ಲಾಧಿಕಾರಿ ಕೆ. ಕೆ. ನಾಯರ್ ಅವರು ಪ್ರಧಾನಿಯ ಆದೇಶವನ್ನು ಪಾಲಿಸಿರಲಿಲ್ಲ.
ಪ್ರಧಾನಿ ಆದೇಶವನ್ನು ಪಾಲಿಸದ ಅಂದಿನ ಜಿಲ್ಲಾಧಿಕಾರಿ ಕೆ.ಕೆ. ನಾಯರ್:ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಎರಡನೇ ಬಾರಿಗೆ ನೀಡಿದ ಸೂಚನೆಯ ಮೇರೆಗೆ ಉತ್ತರ ಪ್ರದೇಶದ ಸಿಎಂ, ಜಿಲ್ಲಾಧಿಕಾರಿ ಕೆ.ಕೆ. ನಾಯರ್ ಅವರಿಗೆ ಮೂರ್ತಿ ತೆರವುಗೊಳಿಸಲು ಮತ್ತೊಮ್ಮೆ ಆದೇಶಿಸಿದರು, ಆದರೆ ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಮತ್ತು ಕೋಮು ಗಲಭೆಗೆ ಕಾರಣವಾಗಬಹುದು ಎಂದು ಅವರು ಮೂರ್ತಿ ತೆರವುಗೊಳಿಸುವ ಆದೇಶವನ್ನು ಎರಡನೇ ಬಾರಿಯೂ ಪಾಲಿಸಿರಲಿಲ್ಲ. ಮೂರ್ತಿ ತೆರವುಗೊಳಿಸುವುದಕ್ಕೂ ಮೊದಲು ತನ್ನನ್ನು ಕೆಲಸದಿಂದ ತೆಗೆಯಬೇಕು ಎಂದು ನಾಯರ್ ಹೇಳಿದ್ದರು. ಪರಿಸ್ಥಿತಿಯನ್ನು ಮನಗಂಡ ಉಭಯ ಸರ್ಕಾರಗಳು ಮೂರ್ತಿ ತೆರವುಗೊಳಿಸುವ ತೀರ್ಮಾನದಿಂದ ಹಿಂದೆ ಸರಿದಿದ್ದವು. ಆದರೆ ಪ್ರಧಾನಿ ಮತ್ತು ಸಿಎಂ ಆದೇಶ ಪಾಲಿಸದ ಕಾರಣ ಅವರನ್ನು ಅಮಾನತು ಮಾಡಲಾಗಿತ್ತು. ನಂತರ ಕೆ.ಕೆ ನಾಯರ್ ಅವರು ಹೈಕೋರ್ಟ್‌ಗೆ ಹೋಗಿ ಸರ್ಕಾರದ ಆದೇಶಕ್ಕೆ ಸ್ಟೇ ತಂದು ಮತ್ತೆ ಫೈಜಾಬಾದ್‌ನ ಜಿಲ್ಲಾಧಿಕಾರಿಯಾಗಿ ಮುಂದುವರಿದಿದ್ದರು.