ಚೆನ್ನೈ (ತಮಿಳುನಾಡು) :ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದರೂ, ಸಂಸತ್ತಿನಲ್ಲಿ ಮಾತನಾಡುವಾಗ ವಿರೋಧ ಪಕ್ಷದ ನಾಯಕನಂತೆ ವರ್ತಿಸುತ್ತಾರೆ. ನನಗೆ ಬಿಜೆಪಿ ವಿಪಕ್ಷ, ಕಾಂಗ್ರೆಸ್ ಆಡಳಿತ ಪಕ್ಷದಂತೆ ಭಾಸವಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಛೇಡಿಸಿದ್ದಾರೆ.
ವಿದೇಶ ಪ್ರವಾಸ ಮುಗಿದ ಬುಧವಾರ ಭಾರತಕ್ಕೆ ವಾಪಸ್ ಬಂದಿರುವ ಸ್ಟಾಲಿನ್ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವಾಗಿದ್ದರೂ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಟೀಕಿಸುವಾಗ ವಿರೋಧ ಪಕ್ಷದ ಭಾಷೆಯಂತೆಯೇ ಇರುತ್ತದೆ. ಮೋದಿ ಕೂಡ ನನಗೆ ವಿಪಕ್ಷ ನಾಯಕನಂತೆ ಕಾಣಿಸುತ್ತಾರೆ ಎಂದು ಹೇಳಿದರು.
ಮೋದಿ ಅವರು ಸಂಸತ್ತಿನಲ್ಲಿ ಆಡಿದ ಮಾತುಗಳನ್ನು ಗಮನಿಸಿದೆ. ಅದರ ವಿಡಿಯೋವನ್ನು ವೀಕ್ಷಿಸಿದೆ. ಇದನ್ನು ನೋಡಿ ನನಗೆ ನಗು ಬಂದಿತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ 'ಬಿಜೆಪಿ ವಿರೋಧ ಪಕ್ಷ, ಕಾಂಗ್ರೆಸ್ ಆಡಳಿತ ಪಕ್ಷ' ಎಂಬಂತೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿಯವ ಈ ವರ್ತನೆ ನನಗೆ ಅರ್ಥವಾಗದ ಒಗಟಾಗಿದೆ ಎಂದು ಡಿಎಂಕೆ ಮುಖ್ಯಸ್ಥ ಹೇಳಿದರು.
400 ಸ್ಥಾನ ಸಾಕೇ?:ಬಿಜೆಪಿ ನೇತೃತ್ವದ ಎನ್‌ಡಿಎ 400 ಕ್ಕೂ ಹೆಚ್ಚು ಸೀಟುಗಳನ್ನು ಗಳಿಸಲಿದೆ ಎಂಬ ಮೋದಿಯವರ ಹೇಳಿಕೆಗೆ ಉತ್ತರಿಸಿದ ಸ್ಟಾಲಿನ್, ಲೋಕಸಭೆಯ ಎಲ್ಲಾ 543 ಸ್ಥಾನಗಳನ್ನು ಎನ್‌ಡಿಎ ಗೆಲ್ಲುತ್ತದೆ ಎಂದು ಪ್ರಧಾನಿ ಹೇಳಿಕೆ ನೀಡಿದರೂ ಆಶ್ಚರ್ಯಪಡಬೇಕಿಲ್ಲ. ಸಂಸತ್ತಿನಲ್ಲಿ ಕೇವಲ 400 ಸ್ಥಾನಗಳು ಮಾತ್ರ ಇವೆಯೇ?. 543 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಮೋದಿ ಹೇಳಬಹುದು ಎಂದು ಕಿಚಾಯಿಸಿದರು.