ನವದೆಹಲಿ:2024ರ ಸಾಲಿನ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಚಾಲನೆ ನೀಡಿದರು. ಪಕ್ಷದ ರಾಷ್ಟ್ರಾಧ್ಯಕ್ಷ, ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಪ್ರಧಾನಿಗೆ ನೋಂದಣಿ ನವೀಕರಣ ಪತ್ರ ನೀಡಿದರು.
ಎರಡು ಹಂತದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ಮೊದಲ ಹಂತ ಸೆಪ್ಟೆಂಬರ್ 2 ರಿಂದ 25 ಮತ್ತು ಎರಡನೇ ಹಂತ ಅಕ್ಟೋಬರ್ 1 ರಿಂದ 15 ರವರೆಗೆ ನಡೆಯಲಿದೆ. 10 ಕೋಟಿಗೂ ಅಧಿಕ ಜನರ ನೋಂದಣಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.
ಕುಟುಂಬದ ವಿಸ್ತರಣೆ:ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಪಕ್ಷದ ಸದಸ್ಯತ್ವ ನೋಂದಣಿ ಕೇವಲ ಅಭಿಯಾನವಲ್ಲ. ಕುಟುಂಬದ ವಿಸ್ತರಣೆ, ಸೈದ್ಧಾಂತಿಕ ಆಂದೋಲನವಾಗಿದೆ. ಭಾರತೀಯ ಜನಸಂಘದಿಂದ ಹಿಡಿದು ಇಲ್ಲಿಯವರೆಗೆ ದೇಶದಲ್ಲಿ ಹೊಸ ರಾಜಕೀಯ ಸಂಸ್ಕೃತಿಯನ್ನು ತರಲು ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಹೇಳಿದರು.
ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಮತ್ತೊಂದು ಸುತ್ತಿನ ಸದಸ್ಯತ್ವ ಅಭಿಯಾನ ಆರಂಭವಾಗುತ್ತಿದೆ. ಜನರು ಅಧಿಕಾರ ನೀಡುವ ಸಂಘಟನೆ ಅಥವಾ ರಾಜಕೀಯ ಪಕ್ಷವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅನುಸರಿಸದಿದ್ದರೆ, ಆಂತರಿಕ ಪ್ರಜಾಪ್ರಭುತ್ವ ಕಾಪಾಡಿಕೊಳ್ಳದಿದ್ದರೆ ಇಂದು ಹಲವಾರು ರಾಜಕೀಯ ಪಕ್ಷಗಳು ಎದುರಿಸುತ್ತಿರುವ ಪರಿಸ್ಥಿತಿ ಎಲ್ಲರಿಗೂ ಬರಲಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.