ಕರ್ನಾಟಕ

karnataka

ETV Bharat / bharat

ರೈತರೇ, ಜೂನ್​ 18 ರಂದು ನಿಮ್ಮ ಖಾತೆ ಚೆಕ್​ ಮಾಡಿಕೊಳ್ಳಿ: ಹಣ ಬರುವುದು ಗ್ಯಾರಂಟಿ! - 17th installment money - 17TH INSTALLMENT MONEY

ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯ 17ನೇ ಕಂತಿನ ಹಣ ಜೂನ್​ 18 ರಂದು ಬಿಡುಗಡೆಯಾಗಲಿದೆ.

ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆ
ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆ (ETV Bharat)

By PTI

Published : Jun 15, 2024, 7:50 PM IST

ನವದೆಹಲಿ:ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರೇಂದ್ರ ಮೋದಿ ಅವರು ಮೊದಲು ಸಹಿ ಹಾಕಿದ್ದೇ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆ ಕಡತಕ್ಕೆ. ಅದರ 17ನೇ ಕಂತಿನ ಹಣ ಜೂನ್​ 18 ರಂದು ದೇಶದ ರೈತರ ಖಾತೆಗೆ ಬೀಳಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್​ 18 ರಂದು ಉತ್ತರಪ್ರದೇಶದ ವಾರಾಣಸಿಗೆ ಭೇಟಿ ನೀಡಲಿದ್ದು, ರೈತರಿಗೆ ನೀಡಬೇಕಾದ ಹಣವೂ ಅಂದೇ ಬಿಡುಗಡೆಯಾಗಲಿದೆ. ದೇಶದ 9.26 ಕೋಟಿ ರೈತ ಫಲಾನುಭವಿಗಳಿಗೆ 20 ಸಾವಿರ ಕೋಟಿ ರೂಪಾಯಿ 17ನೇ ಕಂತಿನ ಹಣ ಕೈಸೇರಲಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕಳೆದ ಎರಡು ಅಧಿಕಾರಾವಧಿಯಲ್ಲಿ ಪ್ರಧಾನಿ ಮೋದಿ ಅವರು ಕೃಷಿಗೆ ಆದ್ಯತೆ ನೀಡಿದ್ದರು. ರೈತರ ಹಿತದೃಷ್ಟಿಯಿಂದ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಮೋದಿ ಅವರು ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯ ಕಡತಕ್ಕೆ ಸಹಿ ಹಾಕಿದ್ದರು ಎಂದರು.

2019 ರಲ್ಲಿ ಪ್ರಾರಂಭವಾದ ಪಿಎಂ ಕಿಸಾನ್​ ಯೋಜನೆಯ ನೇರ ಲಾಭ ವರ್ಗಾವಣೆ (DBT) ಅಡಿಯಲ್ಲಿ ಫಲಾನುಭವಿ ರೈತರು ವರ್ಷದಲ್ಲಿ ಮೂರ ಬಾರಿ 2 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ವಿತರಣೆ ಮಾಡಲಾಗುತ್ತದೆ. ಯೋಜನೆ ಪ್ರಾರಂಭವಾದಾಗಿನಿಂದ ದೇಶಾದ್ಯಂತ ಈವರೆಗೂ 11 ಕೋಟಿಗೂ ಹೆಚ್ಚು ರೈತರಿಗೆ 3.04 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ವಾರಾಣಸಿಯಲ್ಲಿ 'ಕೃಷಿ ಸಖಿ'ಗಳಿಗೆ ಪ್ರಮಾಣಪತ್ರ:ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದರು. ಜೂನ್​ 18 ರಂದು ಅಲ್ಲಿಗೆ ತೆರಳಲಿದ್ದು, ಮತದಾರರಿಗೆ ಧನ್ಯವಾದ ಸಲ್ಲಿಸಲಿದ್ದಾರೆ. ಇದೇ ವೇಳೆ ಕೃಷಿಯಲ್ಲಿ ನೆರವು ನೀಡಲು ನೇಮಕವಾಗಿರುವ 'ಕೃಷಿ ಸಖಿ'ಗಳಿಗೆ ಪ್ರಮಾಣ ಪತ್ರ ವಿತರಿಸಲಿದ್ದಾರೆ. 30 ಸಾವಿರಕ್ಕೂ ಹೆಚ್ಚು ಕೃಷಿ ಸಖಿಯರು ತರಬೇತಿ ಪಡೆದಿದ್ದು, ಅವರಿಗೆ ಪ್ರಧಾನಿ ಪ್ರಮಾಣಪತ್ರ ನೀಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಚಿವರು ಭಾಗವಹಿಸುವ ನಿರೀಕ್ಷೆಯಿದೆ.

ಕೃಷಿ ಸಖಿ ಯೋಜನೆಯು ರೈತ ಸಮುದಾಯಕ್ಕೆ ಸಹಾಯ ಮಾಡಲು ಮತ್ತು ಹೆಚ್ಚುವರಿ ಆದಾಯವನ್ನು ಗಳಿಸಲು ಸ್ವಸಹಾಯ ಗುಂಪುಗಳ 90 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಕೃಷಿ ಸಂಬಂಧಿತ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ. ಈವರೆಗೂ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಜಾರ್ಖಂಡ್, ಆಂಧ್ರಪ್ರದೇಶ, ಮೇಘಾಲಯ ಸೇರಿ 12 ರಾಜ್ಯಗಳಲ್ಲಿ 34 ಸಾವಿರಕ್ಕೂ ಹೆಚ್ಚು ಕೃಷಿ ಸಖಿಗಳಿಗೆ ತರಬೇತಿ ನೀಡಲಾಗಿದೆ.

ಇದನ್ನೂ ಓದಿ:'ಪಿಎಂ ಕಿಸಾನ್ ನಿಧಿ' 17ನೇ ಕಂತಿನ ಹಣ ಬಿಡುಗಡೆ ಕಡತಕ್ಕೆ ಪ್ರಧಾನಿ ಮೋದಿ ಸಹಿ - PM Kisan Nidhi

ABOUT THE AUTHOR

...view details