ನವದೆಹಲಿ: ಪಾಕಿಸ್ತಾನ ಆಕ್ರಮಿತ-ಕಾಶ್ಮೀರ (ಪಿಒಕೆ) ಮೇಲಿನ ತನ್ನ ಹಕ್ಕನ್ನು ಭಾರತ ಎಂದಿಗೂ ಬಿಟ್ಟುಕೊಡುವುದಿಲ್ಲ, ಕಾಶ್ಮೀರದ ಅಭಿವೃದ್ಧಿಯನ್ನು ನೋಡಿದ ನಂತರ ಅಲ್ಲಿನ ಜನರು ಸ್ವತಃ ಭಾರತದ ಭಾಗವಾಗಲು ಬಯಸುವುದರಿಂದ ಅದನ್ನು ಬಲವಂತದಿಂದ ವಶಪಡಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿಂಗ್, ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಕೇಂದ್ರಾಡಳಿತ ಪ್ರದೇಶವಾಗಿರುವ ಅಲ್ಲಿ ಎಎಫ್ಎಸ್ಪಿಎ (ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ) ಕಾಯ್ದೆ ಜಾರಿಯಲ್ಲಿರುವ ಅಗತ್ಯವಿಲ್ಲದ ಸಮಯ ಬರಲಿದೆ ಎಂದು ಸಿಂಗ್ ಪ್ರತಿಪಾದಿಸಿದರು.
ಆದಾಗ್ಯೂ, ಈ ವಿಷಯವು ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿದೆ ಮತ್ತು ಅದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಖಂಡಿತವಾಗಿಯೂ ಚುನಾವಣೆಗಳು ನಡೆಯಲಿವೆ, ಆದರೆ ಯಾವಾಗ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಪರೋಕ್ಷ ಯುದ್ಧವನ್ನು ಉಲ್ಲೇಖಿಸಿದ ರಕ್ಷಣಾ ಸಚಿವರು, ಇಸ್ಲಾಮಾಬಾದ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಪಾಕಿಸ್ತಾನವು ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ, ಆದರೆ ನಾವು ಹಾಗಾಗಲು ಬಿಡುವುದಿಲ್ಲ ಎಂದು ಹೇಳಿದರು.