ಜಮ್ಮು ಮತ್ತು ಕಾಶ್ಮೀರ:ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದ ಹೊರವಲಯದಲ್ಲಿರುವ ಗುಂಡ್‌ಬಾಲ್ ಬಟ್ವಾರಾ ಪ್ರದೇಶದ ಝೀಲಂ ನದಿಯಲ್ಲಿ ಪ್ರಯಾಣಿಕರಿದ್ದ ದೋಣಿಯೊಂದು ಮುಳುಗಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 6 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಐವರನ್ನು ರಕ್ಷಿಸಲಾಗಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ.
ನದಿಗೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ವಿದ್ಯಾರ್ಥಿಗಳು ಮತ್ತು ಜನರು ನದಿ ದಾಟುತ್ತಿದ್ದಾಗ ಸ್ಟೀಲ್ ಪಿಲ್ಲರ್ಗೆ ಡಿಕ್ಕಿ ಹೊಡೆದ ಪರಿಣಾಮ ದೋಣಿ ಮುಳುಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇದರಲ್ಲಿ ವಿದ್ಯಾರ್ಥಿಗಳು ಸೇರಿ 25 ಮಂದಿ ಇದ್ದರು ಎಂದು ಹೇಳಲಾಗಿದೆ.
ಘಟನೆಯ ಮಾಹಿತಿ ತಿಳಿದ ನಂತರ, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಜಂಟಿ ರಕ್ಷಣಾ ತಂಡವು 5 ವಿದ್ಯಾರ್ಥಿಗಳು ಸೇರಿದಂತೆ 6 ಮೃತದೇಹಗಳನ್ನು ಹೊರತೆಗೆದಿದೆ. ಇದೇ ವೇಳೆ ಐವರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಸಾವಿಗೀಡಾದವರ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಶಕ ಕಳೆದರೂ ಪೂರ್ಣವಾಗದ ಬ್ರಿಡ್ಜ್:ದುರಂತಕ್ಕೆ ಪ್ರಮುಖ ಕಾರಣ ನದಿಗೆ ಸೇತುವೆ ಇಲ್ಲದೇ ಇರುವುದು. ಕಳೆದ ಒಂದು ದಶಕದಿಂದ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸ್ಥಳೀಯರು ನದಿ ದಾಟಲು ದೋಣಿಗಳನ್ನೇ ಅವಲಂಬಿಸಿದ್ದಾರೆ. ಬ್ರಿಡ್ಜ್ ಪೂರ್ಣಗೊಂಡಿದ್ದರೆ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಜನರು ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿರುವ ಝೀಲಂ ನದಿ ಕಳೆದೆರಡು ದಿನಗಳಿಂದ ರಭಸವಾಗಿ ಹರಿಯುತ್ತಿದೆ. ಇದರಿಂದ ದೋಣಿ ಸಾಗಿಸಲು ಪರದಾಡಬೇಕಿದೆ.