ನವದೆಹಲಿ:18ನೇ ಲೋಕಸಭಾ ಚುನಾವಣೆ ಫಲಿತಾಂಶ ಕೆಲವು ಅಚ್ಚರಿಗಳನ್ನು ತಂದಿದೆ. ಮತ್ತೆ ಸಲೀಸಾಗಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತೇವೆ ಎಂದುಕೊಂಡಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂಬುದೂ ಫಲಿಸಿಲ್ಲ. ಇದರ ನಡುವೆ ಸಂಸತ್ತಿಗೆ ಹೊಸ ಮುಖಗಳೂ ಆಯ್ಕೆಯಾಗಿದ್ದಾರೆ.
ರಾಜಕಾರಣ ಎಂಬುದು ಹಿರಿಯರ ಪಡಸಾಲೆಯಾಗಿತ್ತು. ಇದೀಗ ಯುವಕರು ಕೂಡ ಹೆಚ್ಚೆಚ್ಚು ಪಾಲ್ಗೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ (ಜೂನ್ 4) ಬಂದ ಫಲಿತಾಂಶದಲ್ಲಿ 25 ವರ್ಷ ವಯೋಮಾನದ ನಾಲ್ವರಾದ ಪುಷ್ಪೇಂದ್ರ ಸರೋಜ್, ಪ್ರಿಯಾ ಸರೋಜ್, ಶಾಂಭವಿ ಚೌಧರಿ ಮತ್ತು ಸಂಜನಾ ಜಾತವ್ ಅವರು ಸಂಸತ್ತಿಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಇವರು ದೇಶದಲ್ಲಿಯೇ ಅತ್ಯಂತ ಕಿರಿಯ ಸಂಸದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪುಷ್ಪೇಂದ್ರ ಸರೋಜ್ ಮತ್ತು ಪ್ರಿಯಾ ಸರೋಜ್ ಅವರು ಸಮಾಜವಾದಿ ಪಕ್ಷದಿಂದ (ಎಸ್‌ಪಿ) ಆಯ್ಕೆಯಾಗಿದ್ದಾರೆ. ಶಾಂಭವಿ ಚೌಧರಿ ಮತ್ತು ಸಂಜನಾ ಜಾತವ್ ಅವರು ಕ್ರಮವಾಗಿ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ.
ಪುಷ್ಪೇಂದ್ರ ಸರೋಜ್:ಸಮಾಜವಾದಿ ಪಕ್ಷದಿಂದ ಲೋಕಸಭಾ ಕಣಕ್ಕಿಳಿದಿದ್ದ ಪುಷ್ಪೇಂದ್ರ ಸರೋಜ್ ಉತ್ತರ ಪ್ರದೇಶದ ಕೌಶಂಬಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಹಾಲಿ ಬಿಜೆಪಿ ಸಂಸದರಾಗಿದ್ದ ವಿನೋದ್ ಕುಮಾರ್ ಸೋಂಕರ್ ಅವರನ್ನು 1,03,944 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪುಷ್ಪೇಂದ್ರ ಅವರು ಬಿಎಸ್ಸಿ ಪದವೀಧರರಾಗಿದ್ದಾರೆ. ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.