ನವದೆಹಲಿ: ಉತ್ತರ ಮತ್ತು ಪೂರ್ವ ಭಾರತದಲ್ಲಿ ಸೂರ್ಯನ ಪ್ರಖರತೆಯ ಅಬ್ಬರ ಮುಂದುವರೆದಿದೆ. ತೀವ್ರ ತಾಪಮಾನದಿಂದಾಗಿ ಇಲ್ಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೀವ್ರ ತಾಪಮಾನ ಸಾವು ನೋವುಗಳನ್ನು ಹೆಚ್ಚಿಸಿದೆ. ಬಿಸಿಲಿನ ತಾಪದಿಂದ ಸಂಕಷ್ಟಕ್ಕೆ ಒಳಗಾಗಿರುವ ನೆರವಿಗೆ ಕೇಂದ್ರ ಸರ್ಕಾರ ಬಂದಿದೆ. ರೋಗಿಗಳ ರಕ್ಷಣೆ ಹಾಗೂ ನೆರವಿಗೆ ಧಾವಿಸುವಂತೆ ಹಾಗೂ ವಿಶೇಷ ಘಟಕಗಳನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರದ ಒಡೆತನದ ಎಲ್ಲ ಆಸ್ಪತ್ರೆಗಳಿಗೆ ಸಲಹೆ ಹಾಗೂ ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳಲ್ಲಿ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹೇಳಿದೆ. ಈ ಮೂಲಕ ಈಗ ಉಂಟಾಗಿರುವ ಹೀಟ್ ವೇವ್ ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್ 12 ಮತ್ತು 18 ರ ನಡುವೆ ಮಾನ್ಸೂನ್ನಲ್ಲಿ ಯಾವುದೇ ಮಹತ್ವದ ಪ್ರಗತಿ ಸಾಧಿಸಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಉತ್ತಮ ಮಾನ್ಸೂನ್ ಮಳೆ ಆಗಲಿದೆ ಎಂದು ಇಲಾಖೆ ಹೇಳಿದೆ. ಹೀಗಾಗಿ ಬಿಸಿಲಿನ ಶಾಖದಿಂದ ತತ್ತರಿಸುತ್ತಿರುವ ಉತ್ತರ ಭಾರತದಲ್ಲಿ ಮಳೆಗಾಗಿ ಎದುರು ನೋಡುವಂತಾಗಿದೆ. ಆದರೆ, ಹವಾಮಾನ ಇಲಾಖೆ ಅಂದಾಜಿಸಿದಂತೆ ಮುಂಗಾರು ಮಳೆ ಆಗುತ್ತಿಲ್ಲ ಎಂಬ ವಿಚಾರ ಹೊರ ಬಿದ್ದಿದೆ. ಇದು ಇಲ್ಲಿನ ಜನರನ್ನು ಇನ್ನಷ್ಟು ಕಂಗಾಲಾಗುವಂತೆ ಮಾಡಿದೆ. ಆದರೂ, ಉತ್ತಮ ಮಳೆಯ ಮುನ್ಸೂಚನೆಯನ್ನು ಐಎಂಡಿ ನೀಡಿದೆ.
ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 43 ರಿಂದ 45 ಡಿಗ್ರಿ ಸೆಲ್ಸಿಯಸ್ನಷ್ಟಿದೆ ಎಂದು IMD ತಿಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಿನಗಳಲ್ಲಿ ಹೀಟ್ ಸ್ಟ್ರೋಕ್ ಮತ್ತು ಶಾಖದ ಬಳಲಿಕೆಯಿಂದ ಹಲವಾರು ಸಾವುಗಳು ಸಂಭವಿಸಿವೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ವರದಿಗಳು ಹೇಳುತ್ತಿವೆ.
48 ಗಂಟೆಯಲ್ಲಿ 50 ಕ್ಕೂ ಹೆಚ್ಚು ಸಾವುಗಳ ವರದಿ: ಕಳೆದ 48 ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ 50 ಶವಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಆದರೆ ಸಾವಿನ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಅವರು ಹೇಳಿದ್ದಾರೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 43.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಅಧಿಕವಾಗಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನವು 35.2 ಡಿಗ್ರಿ ಸೆಲ್ಸಿಯಸ್ ಆಗಿತ್ತು, ಇದು 1969 ರಿಂದ ಜೂನ್ನಲ್ಲಿ ದಾಖಲಾಗಿದ್ದ ತಾಪಮಾನಕ್ಕಿಂತ ಅತಿ ಹೆಚ್ಚು ಎಂದು ತಿಳಿದು ಬಂದಿದೆ.