ಪಾಟ್ನಾ (ಬಿಹಾರ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿದ್ದಾರೆ. ರಾಜಧಾನಿ ಪಾಟ್ನಾದಲ್ಲಿರುವ ರಾಜಭವನದಲ್ಲಿ ಸುಮಾರು ಅರ್ಧ ಗಂಟೆ ರಾಜ್ಯಪಾಲರೊಂದಿಗೆ ನಿತೀಶ್ ಮಾತುಕತೆ ನಡೆಸಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ, ಯಾವ ಕಾರಣಕ್ಕಾಗಿ ರಾಜಭವನಕ್ಕೆ ಸಿಎಂ ದಿಢೀರ್ ತೆರಳಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಕಾರ್ಯಕ್ರಮದ ಬಳಿಕ ಸಿಎಂ ನಿತೀಶ್ ಕುಮಾರ್ ನೇರವಾಗಿ ರಾಜ್ಯಪಾಲರ ಭವನಕ್ಕೆ ತೆರಳಿದರು. ಈ ಸರ್ಕಾರಿ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೂ ಪಾಲ್ಗೊಂಡಿದ್ದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಸಹ ಉಪಸ್ಥಿತರಿದ್ದರು. ಆದರೆ, ಡಿಸಿಎಂ ಅವರನ್ನು ಬಿಟ್ಟು ರಾಜಭವನಕ್ಕೆ ಸಿಎಂ ಅವರೊಬ್ಬರೇ ಹೋಗಿದ್ದು ಅಚ್ಚರಿಗೂ ಕಾರಣವಾಗಿದ್ದು, ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಸಿಎಂ ನಿತೀಶ್ ಅವರೊಂದಿಗೆ ಆಪ್ತ ಸಚಿವ ವಿಜಯ್ ಕುಮಾರ್ ಚೌಧರಿ ಕೂಡ ಇದ್ದರು. ರಾಜ್ಯಪಾಲರೊಂದಿಗೆ ಸಿಎಂ ಭೇಟಿಯು ಸೌಜನ್ಯಯುತವಾಗಿದೆ ಎಂದು ಆರ್‌ಜೆಡಿ ಹೇಳಿದೆ. ಆದಾಗ್ಯೂ ರಾಜ್ಯದಲ್ಲಿ ರಾಜಕೀಯ ಮೇಲಾಟ ನಡೆಯಬಹುದು ಎಂಬ ಹೊಸ ಚರ್ಚೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದೆ. ಸಂಯೋಜಕ ಸ್ಥಾನ ಸಿಗದಿದ್ದಕ್ಕೆ ನಿತೀಶ್ ಕುಮಾರ್ ಕೋಪಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದರಿಂದ ನಿತೀಶ್ ಯಾವಾಗ ಬೇಕಾದರೂ ಪಕ್ಷ ಬದಲಾಯಿಸಬಹುದು ಎಂಬ ವದಂತಿಗಳು ಹಬ್ಬಿವೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಬಗ್ಗೆ ಸುಳಿವು ನೀಡಿದ್ದರು. ನಿತೀಶ್ ನಮ್ಮ ಜೊತೆ ಬರಲು ಬಯಸಿದರೆ, ಅದನ್ನು ಪರಿಗಣಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಬಿಹಾರದಲ್ಲಿ ಈಗ ಆಟ ಶುರುವಾಗಿದೆ ಎಂದು ಸಾಮಾಜಿಕ ಜಾಲತಾಣದ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೊದಲು ಸಹ ನಿತೀಶ್ ಯಾವಾಗ ಬೇಕಾದರೂ ಎನ್‌ಡಿಎ ಸೇರುತ್ತಾರೆ ಮತ್ತು ಸರ್ಕಾರವನ್ನು ಬದಲಾಯಿಸುತ್ತಾರೆ ಎಂದು ಮಾಂಝಿ ಹೇಳಿದ್ದರು.
ಈ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ನಿತೀಶ್ ಇದ್ದರು. ಮೊದಲ ಬಾರಿಗೆ ಮೋದಿ ಅವರನ್ನು ವಿರೋಧಿಸಿ ಅಲ್ಲಿಂದ ಹೊರ ಬಂದಿದ್ದರು. ಆರ್ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರು. ಇದಾದ ಬಳಿಕ ಆರ್‌ಜೆಡಿ ಜೊತೆಗೆ ಸಂಬಂಧ ಕಡಿದುಕೊಂಡು ಮರಳಿ ಬಿಜೆಪಿ ಸಖ್ಯ ಬೆಳೆಸಿದ್ದರು. ಆದರೆ, ಇದಾದ ಕೆಲ ದಿನಗಳಲ್ಲೇ ಬಿಜೆಪಿ ದೋಸ್ತಿ ತೊರೆದು ಮತ್ತೆ ಆರ್ಜೆಡಿಯೊಂದಿಗೆ ಕೈಜೋಡಿಸಿ ಸಿಎಂ ಆಗಿದ್ದಾರೆ. ಸದ್ಯ ಲೋಕಸಭೆ ಚುನಾವಣೆಗೆ ತಯಾರಿ ನಡೆಯುತ್ತಿದೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದೊಂದಿಗೆ ನಿತೀಶ್ ಗುರುತಿಸಿಕೊಂಡಿದ್ದಾರೆ.