ಮುಂಬೈ(ಮಹಾರಾಷ್ಟ್ರ): ವಾಣಿಜ್ಯ ನಗರಿ ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬೃಹತ್ ಜಾಹೀರಾತು ಫಲಕ ಬಿದ್ದು ಸಂಭವಿಸಿದ ಭಾರೀ ಸಾವು ನೋವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಹೀರಾತು ಫಲಕ ಅಳವಡಿಸಿದ್ದ ಖಾಸಗಿ ಕಂಪನಿಯ ನಿರ್ದೇಶಕ ಭವೇಶ್ ಭಿಂಡೆ ಎಂಬಾತನನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹೋರ್ಡಿಂಗ್ ನಿರ್ಮಿಸಿದ ಜಾಹೀರಾತು ಸಂಸ್ಥೆ ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಭಿಂಡೆಯನ್ನು ಮುಂಬೈ ಪೊಲೀಸರ ಅಪರಾಧ ವಿಭಾಗ ಅರೆಸ್ಟ್ ಮಾಡಿದೆ. ಸೋಮವಾರ ಮುಂಬೈನಲ್ಲಿ ಧೂಳು ಸಹಿತ ಬೀಸಿದ ಬಿರುಗಾಳಿಗೆ ಜಾಹೀರಾತು ಫಲಕ ಕುಸಿದು ಪೆಟ್ರೋಲ್ ಪಂಪ್ ಮೇಲೆ ಬಿದ್ದಿತ್ತು. ಘಟನೆಯಲ್ಲಿ 16 ಜನ ಸಾವನ್ನಪ್ಪಿ, 75ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.