ನವದೆಹಲಿ:ವಿದೇಶದಿಂದ ತಂದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಆಪ್ತ ಸಹಾಯಕ ಶಿವಕುಮಾರ್ ಪ್ರಸಾದ್ ಎಂಬವರನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ನಿನ್ನೆ ದುಬೈನಿಂದ ಬಂದಿದ್ದ ವ್ಯಕ್ತಿಯನ್ನು ಬರಮಾಡಿಕೊಳ್ಳಲು ಶಿವಕುಮಾರ್ ಪ್ರಸಾದ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ವಿದೇಶದಿಂದ ಆಗಮಿಸಿದ್ದ ವ್ಯಕ್ತಿ ಸುಮಾರು 500 ಗ್ರಾಂ ಚಿನ್ನವನ್ನು ಪ್ರಸಾದ್‌ಗೆ ನೀಡಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದಾರೆ. ಈ ವೇಳೆ ಶಿವಕುಮಾರ್ ಪ್ರಸಾದ್ ನಾನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಶಿ ತರೂರು ಪ್ರತಿಕ್ರಿಯೆ: ಘಟನೆಗೆ ಸಂಬಂಧಿಸಿದಂತೆ ಶಶಿ ತರೂರ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿದ್ದು, 'ನಾನು ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಧರ್ಮಶಾಲಾದಲ್ಲಿದ್ದೇನೆ. ನನ್ನ ಸಿಬ್ಬಂದಿಯ ಬಂಧನದ ಕುರಿತು ಕೇಳಿ ಆಘಾತಕ್ಕೊಳಗಾಗಿದ್ದೇನೆ. 72 ವರ್ಷ ವಯಸ್ಸಿನ ಅವರು ನಿವೃತ್ತಿ ಹೊಂದಿದ್ದು, ಡಯಾಲಿಸಿಸ್ನಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಸಹಾನುಭೂತಿಯ ಆಧಾರದಡಿ ಅರೆಕಾಲಿಕ ಸಹಾಯಕನನ್ನಾಗಿ ಉಳಿಸಿಕೊಳ್ಳಲಾಗಿತ್ತು. ಆದರೆ ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ನಾನು ಕ್ಷಮಿಸುವುದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ' ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಘಟನೆಯನ್ನು ಉಲ್ಲೇಖಿಸಿ, ಕಾಂಗ್ರೆಸ್ ಮತ್ತು ಸಿಪಿಎಂ "ಚಿನ್ನ ಕಳ್ಳಸಾಗಣೆದಾರರ ಮೈತ್ರಿ" ಎಂದು ಟೀಕಿಸಿದ್ದಾರೆ. ಈ ಮೊದಲು ಚಿನ್ನ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ ಕಾರ್ಯದರ್ಶಿ ಭಾಗಿಯಾದ್ದರು. ಇದೀಗ ಕಾಂಗ್ರೆಸ್ ಸಂಸದನ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ. ಸಿಪಿಎಂ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಮತ್ತು ಕಾಂಗ್ರೆಸ್ ಎರಡೂ ಇಂಡಿಯಾ ಮೈತ್ರಿ ಕೂಟದ ಭಾಗವಾಗಿವೆ. ಇದು ಚಿನ್ನ ಕಳ್ಳಸಾಗಣೆದಾರರ ಮೈತ್ರಿ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ:'ಗಾಂಧಿ' ಸಿನಿಮಾಗೂ ಮುನ್ನ ಅವರು ಯಾರೆಂದು ಜಗತ್ತಿಗೆ ಗೊತ್ತಿರಲಿಲ್ಲ': ಮೋದಿ ಹೇಳಿಕೆಗೆ ಕಾಂಗ್ರೆಸ್ ಹಿಗ್ಗಾಮುಗ್ಗಾ ತರಾಟೆ - Congress Attacks PM Modi