ನವದೆಹಲಿ: ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆ ಅಥವಾ ತೆಹಖಾನಾದಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶದ ವಿರುದ್ಧ ಅಂಜುಮನ್ ಇಂತೆಝಾಮಿಯಾ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಲಿದೆ. ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಪ್ರಕಟವಾದ ವಿಚಾರಣಾ ಪಟ್ಟಿಯ ಪ್ರಕಾರ, ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಜುಲೈ 23 ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ.
ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಸಮುದಾಯದವರು ಪ್ರಾರ್ಥನೆ ನಡೆಸುವ ಬಗ್ಗೆ ಜನವರಿ 31 ರ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ನ ನಿರ್ಧಾರಕ್ಕೆ ಯಾವುದೇ ಮಧ್ಯಂತರ ಆದೇಶ ನೀಡಲು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ನ್ಯಾಯಪೀಠವು ಏಪ್ರಿಲ್ನಲ್ಲಿ ನಿರಾಕರಿಸಿತ್ತು.
ಎರಡೂ ಸಮುದಾಯಗಳಿಗೆ ಧಾರ್ಮಿಕ ಪೂಜೆ ಸಲ್ಲಿಸಲು ಅವಕಾಶ ನೀಡುವ ಮೂಲಕ ವಿವಾದಿತ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
"ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಆದೇಶಗಳ ನಂತರ ನಮಾಜ್ ಮಾಡಲು ಮುಸ್ಲಿಂ ಸಮುದಾಯದವರಿಗೆ ಯಾವುದೇ ಅಡ್ಡಿ ಉಂಟಾಗಿಲ್ಲ ಮತ್ತು ಹಿಂದೂ ಪುರೋಹಿತರು ಪೂಜೆ ಮಾಡುವ ವಿಚಾರವು ನೆಲಮಾಳಿಗೆಗೆ ಸಂಬಂಧಿಸಿದ್ದಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಎರಡೂ ಸಮುದಾಯಗಳಿಗೆ ಧಾರ್ಮಿಕ ಪೂಜೆ ಸಲ್ಲಿಸಲು ಅವಕಾಶ ನೀಡುವ ಮೂಲಕ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದು ಸೂಕ್ತವಾಗಿದೆ." ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಲ್ಲದೆ ತನ್ನ ಅನುಮತಿಯಿಲ್ಲದೆ ಯಥಾಸ್ಥಿತಿಗೆ ಯಾವುದೇ ಭಂಗ ತರಕೂಡದು ಎಂದು ಅದು ಆದೇಶಿಸಿದೆ.