ಜೈಪುರ್( ರಾಜಸ್ಥಾನ): ದುಷ್ಕರ್ಮಿಗಳಿಬ್ಬರು ಬ್ಯಾಂಕ್‌ಗೆ ನುಗ್ಗಿ ದರೋಡೆ ನಡೆಸಲು ಯತ್ನಿಸಿದ್ದಾರೆ. ಇದಕ್ಕೆ ಕ್ಯಾಷಿಯರ್ ಅಡ್ಡಪಡಿಸಿದ್ದರಿಂದ ಆತನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಇಲ್ಲಿಯ ಝೋತ್ವಾರಾ ಪ್ರದೇಶದ ಜೋಶಿ ಮಾರ್ಗದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಬ್ಯಾಂಕ್ ಕ್ಯಾಷಿಯರ್ ನರೇಂದ್ರ ಕುಮಾರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ದುಷ್ಕರ್ಮಿಗಳ ಸುತ್ತುಗಟ್ಟಿ ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ, ಒಬ್ಬ ತಪ್ಪಿಸಿಕೊಂಡಿದ್ದು ಮತ್ತೋರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ವಿವರ:ಝೋತ್ವಾರಾ ಎಸಿಪಿ ಸುರೇಂದ್ರ ಸಿಂಗ್ ರನೌತ್ ಪ್ರಕಾರ, ಇಂದು ಬೆಳಗ್ಗೆ ಬ್ಯಾಂಕ್ ಓಪನ್ ಆದ ಕೆಲ ಹೊತ್ತಿಗೆ ಇಬ್ಬರು ಮುಸುಕುದಾರಿಗಳು ಬಂದೂಕಿನೊಂದಿಗೆ ಬ್ಯಾಂಕ್‌ಗೆ ನುಗ್ಗಿದ್ದಾರೆ. ದರೋಡೆ ಮಾಡುವ ಉದ್ದೇಶದಿಂದ ಶಾಖೆ ಒಳ ನುಗ್ಗಿ ಅಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರನ್ನು ಓರ್ವ ಬಂದೂಕು ತೋರಿಸಿ ಬೆದರಿಸತೊಡಗಿದ್ದಾನೆ. ಅಷ್ಟರಲ್ಲಿ ಮತ್ತೋರ್ವ ಕ್ಯಾಷಿಯರ್ ಕೌಂಟರ್ಗೆ ನುಗ್ಗಿ ಹಣ ದೋಚಲು ಮುಂದಾಗಿದ್ದಾನೆ. ಇದನ್ನು ಕ್ಯಾಷಿಯರ್ ನರೇಂದ್ರ ಕುಮಾರ್ ತಡೆದಿದ್ದಾರೆ. ಈ ವೇಳೆ ಮುಸುಕುದಾರಿ ಕ್ಯಾಷಿಯರ್ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡಿನ ಸದ್ದು ಕೇಳುತ್ತಿದ್ದಂತೆ ಬ್ಯಾಂಕ್‌ನ ಹೊರಗೆ ಜಮಾಯಿಸಿದ್ದ ಜನ ಒಳ ಬಂದು ಇಬ್ಬರನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಓರ್ವ ತಪ್ಪಿಸಿಕೊಂಡಿದ್ದು ಮತ್ತೋರ್ವ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.