ಭವಿಷ್ಯದ ದೃಷ್ಠಿಯಿಂದ ಮತ್ತು ಆಕಸ್ಮಿಕವಾಗಿ ಕಾಲವಾದ ಬಳಿಕ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದೆಂಬ ಉದ್ದೇಶದಿಂದ ಬಹುತೇಕರು ವಿಮಾ ಪಾಲಿಸಿ ಮಾಡಿಸಿರುತ್ತಾರೆ. ಅದರಲ್ಲೂ ಬಹುಪಾಲು ಜನರು ದೇಶದ ಅತಿದೊಡ್ಡ ಸಾರ್ವಜನಿಕ ಜೀವ ವಿಮಾ ನಿಗಮ (LIC)ದಲ್ಲಿ ಪಾಲಿಸಿಗಳನ್ನು ಹೊಂದಿದ್ದಾರೆ. ಆದರೆ ಕೆಲವರು ವಿಮಾ ಪಾಲಿಸಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ಎಲ್ಐಸಿ ಬಳಿ ವಾರಸುದಾರರಿಲ್ಲದ ನೂರಾರು ಕೋಟಿ ಹಣ ಉಳಿದಿದೆ. 2023 -24ರ ಹಣಕಾಸು ವರ್ಷದಲ್ಲಿ ಎಲ್ಐಸಿ ಬಳಿ ಸುಮಾರು 880.93 ಕೋಟಿ ರೂ. ಮೆಚ್ಯೂರಿಟಿ ಹಣ ಇದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದರು.
ಎಲ್ಐಸಿ ಪಾಲಿಸಿದಾರರಲ್ಲಿ ಗ್ರಾಮೀಣ ಪ್ರದೇಶದವರೇ ಹೆಚ್ಚಿರುವುದರಿಂದ ವಿಮಾ ನೀತಿಗಳು ಮತ್ತು ಹಣ ಮರಳಿ ಪಡೆಯುವ ವಿಧಾನ ಅಷ್ಟಾಗಿ ತಿಳಿದಿರಲ್ಲ. ಜೊತೆಗೆ ಕೆಲವರು ವಿಮಾ ಪಾಲಿಸಿಗಳ ಬಗ್ಗೆ ಕುಟುಂಬಸ್ಥರಿಗೆ ಹೇಳದೇ ಮೃತಪಟ್ಟಿರುತ್ತಾರೆ. ಇನ್ನು ಜೀವಂತವಾಗಿದ್ದರೂ ಕೆಲ ಕಂತುಗಳನ್ನು ತುಂಬಿ ಇನ್ನುಳಿದ ಕಂತುಗಳನ್ನು ತುಂಬದೆ ಹಾಗೇ ಬಿಟ್ಟಿರುತ್ತಾರೆ. ಇದರಿಂದಾಗಿ ವಿಮಾ ಹಣವನ್ನು ಯಾರೂ ಕ್ಲೇಮ್ ಮಾಡದೇ ಇದ್ದಾಗ ಆ ಹಣ ಎಲ್ಐಸಿ ಬಳಿಯೇ ಉಳಿದುಕೊಳ್ಳತ್ತದೆ.
ವಾರಸುದಾರರಿಲ್ಲದ ಹಣ ಎಂದರೇನು (Unclaimed Amount)?
ಕ್ಲೈಮ್ ಮಾಡದ ಪಾಲಿಸಿಗಳು ಎಂದರೆ ಪಾಲಿಸಿದಾರರು ಅವಧಿ ಮುಗಿದ ನಂತರವೂ ಹಿಂಪಡೆಯದ ಹಣ. ನಿಯಮಗಳ ಪ್ರಕಾರ, ಪಾಲಿಸಿ ಅವಧಿ ಮುಗಿದ ನಂತರ ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಮಾ ಕಂಪನಿಯಿಂದ ಹಣವನ್ನು ಹಿಂಪಡೆಯದಿದ್ದರೆ ಅದನ್ನು ಕ್ಲೈಮ್ ಮಾಡದ ಹಣವೆಂದು ಪರಿಗಣಿಸಲಾಗುತ್ತದೆ. ಪಾಲಿಸಿದಾರರು ಮಧ್ಯದಲ್ಲಿ ಪ್ರೀಮಿಯಂ ಪಾವತಿಸುವುದನ್ನು ನಿಲ್ಲಿಸಿದರೂ, ಕೆಲ ಕಂತು ತುಂಬಿ ಮರೆತರೂ ಅಥವಾ ಪಾಲಿಸಿಯ ಬಗ್ಗೆ ಯಾರಿಗೂ ಹೇಳದೆ ಸತ್ತರೂ ಅದು ಕ್ಲೈಮ್ ಮಾಡದ ಹಣವಾಗುತ್ತದೆ. ವಿಮಾ ಪಾಲಿಸಿಯ ಎಲ್ಲ ಕಂತುಗಳು ಮುಗಿದರೂ ಕೆಲವರು ಆ ಹಣವನ್ನು ತೆಗೆದುಕೊಳ್ಳದೇ ಹಾಗೇ ಬಿಟ್ಟರೂ ಅದು ವಾರಸುದಾರರಿಲ್ಲದ ಹಣವಾಗುತ್ತದೆ. ಹೀಗೆ ವಾರಸುದಾರರಿಲ್ಲದ ಹಣ ಎಲ್ಐಸಿ ಬಳಿಯೇ ಉಳಿದಿದೆ.