ಶಿಮ್ಲಾ: ಹಿಮಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ಮತದಾನ ಪೂರ್ಣಗೊಂಡಿದ್ದು, 6 ರಿಂದ 9 ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇದರಿಂದಾಗಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಅಂಗಳದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನವು, ಚಿಂತಪುರಿ ಕಾಂಗ್ರೆಸ್ ಶಾಸಕ ಸುದರ್ಶನ್ ಬಬ್ಲೂ ಅವರು ಕೊನೆಯ ಮತ ಚಲಾಯಿಸುವ ಮೂಲಕ ಕೊನೆಗೊಂಡಿತು. 6ರಿಂದ 9 ಶಾಸಕರು ಅಡ್ಡ ಮತದಾನ ಮಾಡಿದ್ದು, ಇದು ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಅವರಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ. ಅಡ್ಡ ಮತದಾನ ಮಾಡಿದವರಲ್ಲಿ, ಸ್ವತಂತ್ರ ಶಾಸಕರು ಹಾಗೂ ಕಾಂಗ್ರೆಸ್ ಶಾಸಕರು ಸೇರಿದ್ದಾರೆ. ಅವರು ಕಾಂಗ್ರೆಸ್ಗೆ ಮತ ಹಾಕುವ ಬದಲು ಬಿಜೆಪಿಗೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಎಲ್ಲಾ 68 ಶಾಸಕರು ಮತ ಚಲಾಯಿಸಿದ್ದಾರೆ. ಹಮೀಪುರದ ಸ್ವತಂತ್ರ ಶಾಸಕ ಅಶಿಶ್ ಮೊದಲ ಮತ ಚಲಾಯಿಸಿದರು. ಕಾಂಗ್ರೆಸ್ ಶಾಸಕ ಬಬ್ಲೂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಅವರನ್ನು ಹೆಲಿಕಾಪ್ಟರ್ನಲ್ಲಿ ವಿಧಾನಸೌಧಕ್ಕೆ ಕರೆದುಕೊಂಡು ಬರಲಾಯಿತು.
ಮತ ಚಲಾಯಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, "ಶಾಸಕರು ಪಕ್ಷದ ಸಿದ್ಧಾಂತದ ಪ್ರಕಾರ ಮತ ಚಲಾಯಿಸಿದ್ದಾರೆ. ವಿಧಾನಸಭೆಯಲ್ಲಿ ಒಟ್ಟು 40 ಶಾಸಕರಿದ್ದು, ಯಾವ ಶಾಸಕರನ್ನು ಖರೀದಿಸದೇ ಇದ್ದರೂ, ನಾವು ಬಹುಮತಗಳನ್ನು ಪಡೆಯುತ್ತೇವೆ" ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಈ ಹಿಂದೆ, "ಮತ ಚಲಾಯಿಸುವುದು ಶಾಸಕರ ಪ್ರಜಾಸತ್ತಾತ್ಮಕ ಹಕ್ಕು. ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಅಗತ್ಯವಿಲ್ಲ. ಪರಿಸ್ಥಿತಿಗೆ ತಕ್ಕಂತಹ ಅಭ್ಯರ್ಥಿಯನ್ನು ನಾವು ಕಣಕ್ಕಿಳಿಸಿದ್ದೇವೆ. ಮತ್ತು ಎಲ್ಲಾ ನಮ್ಮ ಶಾಸಕರು ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸುತ್ತಾರೆ ಎಂದು ಭಾವಿಸುತ್ತೇವೆ" ಎಂದು ಹೇಳಿದ್ದರು.
ಕಾಂಗ್ರೆಸ್ನಿಂದ ಅಭಿಷೇಕ್ ಮನು ಸಿಂಘ್ವಿ ಸ್ಪರ್ಧಿಸಿದ್ದು, ಅವರ ವಿರುದ್ಧ ಬಿಜೆಪಿ ಹರ್ಷ ಮಹಾಜನ್ ಅವರನ್ನು ಕಣಕ್ಕಿಳಿಸಿತ್ತು. ಮೂರು ಬಾರಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವರಾಗಿದ್ದ ಮಹಾಜನ್ ಅವರು, 2022ರಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು. 68 ಶಾಸಕರ ಪೈಕಿ 40 ತಮ್ಮ ಹಾಗೂ ಮೂವರು ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬಂದಿತ್ತು.
25 ಶಾಸಕರನ್ನು ಹೊಂದಿರುವ ಬಿಜೆಪಿ ನಂಬರ್ ಗೇಮ್ನಲ್ಲಿ ತೀರಾ ಹಿಂದುಳಿದಿದ್ದರೂ, ಸಿಂಘ್ವಿ ವಿರುದ್ಧ ಮಹಾಜನ್ ಅವರನ್ನು ಕಣಕ್ಕಿಳಿಸುವ ಮೂಲಕ ಸ್ಫರ್ಧಿಸಿತ್ತು. ಸಿಂಘ್ವಿಗೆ ಮತ ಹಾಕುವಂತೆ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ಆಡಳಿತಾರೂಢ ಕಾಂಗ್ರೆಸ್ ತನ್ನ ಶಾಸಕರ ಮೇಲೆ ಒತ್ತಡ ಹೇರಲು ವಿಪ್ ಜಾರಿ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಮತದಾನ ಶಾಸಕರ ಪ್ರಜಸತ್ತಾತ್ಮಕ ಆಯ್ಕೆ, ಅವರ ಇಚ್ಛೆಯಂತೆ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು.
ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕಾಂಗ್ರೆಸ್ ನೀಡಿದ್ದ ಮೂರು ಸಾಲಿನ ವಿಪ್ ಬಗ್ಗೆ ಗಮನ ಸೆಳೆದಿದ್ದ ಬಿಜೆಪಿ ಅಭ್ಯರ್ಥಿ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಕಳುಹಿಸಿದ್ದರು. ಇಂತಹ ವಿಪ್ ಅನೈತಿಕ ಮಾತ್ರವಲ್ಲ, ರಾಜ್ಯಸಭೆಗೆ ಚುನಾವಣೆ ನಡೆಸುವುದರ ವಿರುದ್ಧವೂ ಆಗಿದೆ. ಇದು ಶಾಸಕರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಹಾಜನ್ ತಮ್ಮ ದೂರಿನಲ್ಲಿ ತಿಳಿಸಿದ್ದರು.
ಹಿಮಾಚಲ ವಿಧಾನಸಭೆಯ ಸಂಖ್ಯಾಬಲ: 68 ಸಂಖ್ಯಾಬಲ ಹೊಂದಿರುವ ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ 40 ಕಾಂಗ್ರೆಸ್ ಹಾಗೂ 25 ಬಿಜೆಪಿಯ ಶಾಸಕರಿದ್ದಾರೆ. ಇದಲ್ಲದೆ 3 ಜನ ಸ್ವತಂತ್ರ ಶಾಸಕರಿದ್ದಾರೆ. ರಾಜ್ಯಸಭಾ ಅಭ್ಯರ್ಥಿಯ ಗೆಲುವಿಗೆ 35 ಶಾಸಕರ ಮತಗಳ ಅಗತ್ಯವಿತ್ತು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತವಾಗಿದ್ದರೂ, ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಪರವಾಗಿ 6 ರಿಂದ 9 ಶಾಸಕರ ಅಡ್ಡ ಮತದಾನ ಲೆಕ್ಕಾಚಾರವನ್ನೇ ಬುಡಮೇಲು ಮಾಡುವ ಸಾಧ್ಯತೆ ಇದೆ. 9ಕ್ಕಿಂತ ಕಡಿಮೆ ಶಾಕರು ಅಡ್ಡ ಮತದಾನ ಮಾಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ. ಆದರೆ 9 ಶಾಸಕರು ಅಡ್ಡ ಮತದಾನ ಮಾಡಿದ್ದು, ಎಲ್ಲ ಮತಗಳೂ ಸಿಂಧು ಎನಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತಲಾ 34 ಮತಗಳನ್ನು ಪಡೆಯಲಿದ್ದಾರೆ. ಹೀಗಾದಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಬೇಕಾಗುತ್ತದೆ.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ; ಎಸ್ಟಿ ಸೋಮಶೇಖರ್ ಅಡ್ಡಮತದಾನ, ಶಿವರಾಮ್ ಹೆಬ್ಬಾರ್ ಗೈರು