ಪ್ರಯಾಗ್‌ರಾಜ್ (ಉತ್ತರ ಪ್ರದೇಶ):ಮಹಾ ಕುಂಭಮೇಳದಲ್ಲಿ ಭಾಗವಹಿಸಲು 65 ವರ್ಷದ ಫ್ರೆಂಚ್ ಮಹಿಳೆ ಪ್ಯಾಸ್ಕಲ್ ಎಂಬವರು ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ. ಬಾಲ್ಯದಿಂದಲೇ ಹಿಂದೂ ಧರ್ಮದ ಕಡೆಗೆ ಆಕರ್ಷಿತರಾಗಿದ್ದ ಇವರು, ಶಿವನನ್ನು ತನ್ನ ಆರಾಧ್ಯ ದೈವವೆಂದು ಪರಿಗಣಿಸುತ್ತಾರೆ. ಅಷ್ಟೇ ಅಲ್ಲದೇ, ಭಗವದ್ಗೀತೆ ಮತ್ತು ಪುರಾಣಗಳ ಕುರಿತು ಜ್ಞಾನ ಹೊಂದಿದ್ದಾರೆ.
"ನನಗೆ ಹಿಂದೂ ಧರ್ಮ ಮತ್ತು ಶಿವನ ಮೇಲೆ ಅಪಾರ ಪ್ರೀತಿ, ಭಕ್ತಿ ಇದೆ. ಹಿಂದೂ ಧರ್ಮಕ್ಕೆ ನನ್ನ ಮನಸ್ಸಿನಲ್ಲಿ ವಿಶೇಷ ಪ್ರೀತಿ ಇದೆ" ಎಂದು ಪ್ಯಾಸ್ಕಲ್ ತಿಳಿಸಿದರು.
ಪ್ಯಾಸ್ಕಲ್ ಅವರ ಹಿಂದೂ ಧರ್ಮದೊಂದಿಗಿನ ಸಂಬಂಧ 1984ರಷ್ಟು ಹಿಂದಿನದ್ದು. ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದಾಗಲೇ ಹಿಂದೂ ಧರ್ಮದೆಡೆಗೆ ಆಕರ್ಷಿತರಾಗಿದ್ದರಂತೆ. ಸನಾತನ ಸಂಪ್ರದಾಯದಿಂದ ಅವರು ಪ್ರಭಾವಿತರಾಗಿದ್ದಾರೆ.
"ನನಗೆ ಮಹಾ ಕುಂಭಮೇಳದ ಸಾಕಷ್ಟು ವಿಚಾರಗಳು ತಿಳಿದಿವೆ. ಸಮುದ್ರ ಮಂಥನದ ಬಗ್ಗೆಯೂ ಸಂಪೂರ್ಣ ಮಾಹಿತಿ ಇದೆ. ನನಗೆ ಇಲ್ಲಿ ಸಾಧುಗಳು, ಸನ್ಯಾಸಿಗಳು ಮತ್ತು ಹಿಂದೂಗಳನ್ನು ಭೇಟಿಯಾಗುವುದು ಇಷ್ಟ" ಎಂದರು.
ಪ್ಯಾಸ್ಕಲ್ ತನ್ನ ಸ್ನೇಹಿತನಿಂದ ಪಡೆದ ಉಡುಗೊರೆಯಾದ ರುದ್ರಾಕ್ಷಿ ಮಾಲೆಯನ್ನು ತೋರಿಸಿದರು. "ನಾನು ನನ್ನ ಕುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದೇನೆ. ಅದನ್ನು ನನ್ನ ಸ್ನೇಹಿತ ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ಧರಿಸಿದಾಗ ಅದು ನನ್ನನ್ನು ರಕ್ಷಿಸುತ್ತದೆ ಎಂದು ನನಗನಿಸುತ್ತದೆ" ಎಂದು ತಿಳಿಸಿದರು.
ಮಹಾ ಕುಂಭಮೇಳದಲ್ಲಿನ ವ್ಯವಸ್ಥೆಗಳನ್ನು ಶ್ಲಾಘಿಸಿದ ಅವರು, "ಭದ್ರತೆ, ಉಚಿತ ವಸತಿ, ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಚೆನ್ನಾಗಿದೆ. ಕೋಟ್ಯಂತರ ಜನರು ಇಲ್ಲಿಗೆ ಬರುತ್ತಿದ್ದಾರೆ. ನಾನು ಇಲ್ಲಿ ತುಂಬಾ ಸುರಕ್ಷಿತವಾಗಿದ್ದೇನೆ ಎಂದು ಭಾವಿಸುತ್ತೇನೆ. ಇಲ್ಲಿ ಉಳಿಯಲು ಉಚಿತ ವಸತಿ, ಉಚಿತ ಆಹಾರ ಮತ್ತು ಪಾನೀಯಗಳನ್ನು ಮಾಡಿದ್ದಾರೆ. ಎಲ್ಲಾ ವ್ಯವಸ್ಥೆಗಳು ತುಂಬಾ ಚೆನ್ನಾಗಿವೆ" ಎಂದರು.
ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮ ಮಹಾಕುಂಭಮೇಳವನ್ನು ಪ್ರತಿ 12 ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ. ಜನವರಿ 13ರಿಂದ ಫೆಬ್ರವರಿ 26ರವರೆಗೆ ಪ್ರಯಾಗ್‌ರಾಜ್‌ನಲ್ಲಿ ಅಪಾರ ಭಕ್ತರು ಸೇರುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಇದನ್ನೂ ಓದಿ:ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದೀರಾ? ಈ ಟಿಪ್ಸ್ ಅನುಸರಿಸಿದರೆ ನಿಮ್ಮ ಪ್ರಯಾಣ ಸುಖಕರ & ಸುರಕ್ಷಿತ - MAHA KUMBH MELA 2025 TRAVELING TIPS
ಇದನ್ನೂ ಓದಿ:ಜ.13ರಿಂದ ಕುಂಭಮೇಳ: ಸಿದ್ಧತೆ ಬಹುತೇಕ ಪೂರ್ಣ, 40 ಕೋಟಿ ಜನರ ಆಗಮನ ನಿರೀಕ್ಷೆ - KUMBH MELA 2025