ನುಹ್ (ಹರಿಯಾಣ): ಹರಿಯಾಣದ ನುಹ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆವೊಂದು ನಡೆದಿದೆ. ಕುಂಡ್ಲಿ- ಮಾನೇಸರ್- ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ತಡರಾತ್ರಿ ಭಕ್ತರು ಪ್ರಯಾಣಿಸುತ್ತಿದ್ದ ಬಸ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಕೆಲವೇ ಹೊತ್ತಿನಲ್ಲಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅವಘಡದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿ ಸಜೀವ ದಹನವಾಗಿದ್ದಾರೆ. 24ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಚಲಿಸುತ್ತಿದ್ದ ಬಸ್‌ಗೆ ಬೆಂಕಿ:ಅಪಘಾತದಲ್ಲಿ ಮೃತಪಟ್ಟವರು ಚಂಡೀಗಢ ಮತ್ತು ಪಂಜಾಬ್ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಇವರೆಲ್ಲರೂ ಮಥುರಾ ಮತ್ತು ವೃಂದಾವನಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದವರು. ಬಸ್ಸಿನಲ್ಲಿ ಸುಮಾರು 60 ಜನ ಪ್ರಯಾಣಿಕರು ಇದ್ದರು. ಅವರಲ್ಲಿ ಮಕ್ಕಳು ಮತ್ತು ಮಹಿಳೆಯರೂ ಸೇರಿದ್ದರು. ನುಹ್ ಜಿಲ್ಲೆಯ ತವಾಡು ಪಟ್ಟಣದ ಸಮೀಪವಿರುವ ಕುಂಡ್ಲಿ- ಮಾನೇಸರ್- ಪಲ್ವಾಲ್ ಎಕ್ಸ್‌ಪ್ರೆಸ್‌ವೇನಲ್ಲಿ ಬಸ್ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಎಂಟು ಮಂದಿ ಸಜೀವ ದಹನವಾಗಿದ್ದಾರೆ.
ಡ್ರೈವರ್ ಗಮನಕ್ಕೂ ಬಂದಿಲ್ಲ:ಬಸ್ನಲ್ಲಿದ್ದ ಪ್ರಯಾಣಿಕರಾದ ಸರೋಜ ಎಂಬುವರು ಮಾತನಾಡಿ, ''ಟೂರಿಸ್ಟ್ ಬಸ್ ಬಾಡಿಗೆ ಪಡೆದಿದ್ದೆವು. ಬನಾರಸ್, ಮಥುರಾ, ವೃಂದಾವನ ದರ್ಶನ ಪಡೆದು ವಾಪಸ್ ಮರಳುತಿದ್ದೆವು. ಈ ಬಸ್‌ನಲ್ಲಿ ಒಟ್ಟು 60 ಮಂದಿ ಇದ್ದೆವು. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಇದ್ದಾರೆ. ನಾವೆಲ್ಲರೂ ಹತ್ತಿರದ ಸಂಬಂಧಿಗಳು. ಪಂಜಾಬ್‌ನ ಲೂಧಿಯಾನ, ಹೋಶಿಯಾಪುರ ಮತ್ತು ಚಂಡೀಗಢ ನಿವಾಸಿಗಳು. ದರ್ಶನ ಮುಗಿಸಿ ಹಿಂತಿರುಗುತ್ತಿದ್ದಾಗ, ತಡರಾತ್ರಿ ಬಸ್ಸಿನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದು ಚಾಲಕನಿಗೆ ಗಮನಕ್ಕೆ ಬರಲಿಲ್ಲ'' ಎಂದು ತಿಳಿಸಿದರು.