ನವದೆಹಲಿ: ಇಲ್ಲಿನ ತಿಲಕ್ ಮಾರ್ಗ್ನಲ್ಲಿ ಐಷರಾಮಿ ಬಿಎಂಡಬ್ಲ್ಯೂ ಕಾರ್ ಸಿಗ್ನಲ್ ಜಂಪ್ ಮಾಡಿ ವೇಗವಾಗಿ ಸಾಗಿ ಆಟೋಗೆ ಗುದ್ದಿದ ಪರಿಣಾಮ 63 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಸೆಪ್ಟೆಂಬರ್ 12ರಂದು ಬೆಳಗ್ಗೆ 5ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನೀರಜ್ ಕುಮಾರ್ ತನ್ನ ತಂದೆ ಸಚ್ಚಿದಾನಂದ, ಪತ್ನಿ ಕುಮಾರಿ ಸಲ್ಮಾ, ಇಬ್ಬರು ಮಕ್ಕಳಾದ ಯಶರಾಜ್ ಮತ್ತು ಹಂಸರಾಜ್ ಅವರೊಂದಿಗೆ ನವದೆಹಲಿ ರೈಲ್ವೆ ನಿಲ್ದಾಣದಿಂದ ಆಟೋ ರಿಕ್ಷಾದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಆಟೋ ಸಿಕಂದ್ರ ಮತ್ತು ಮಥುರಾ ರೋಡ್ ಸಿಗ್ನಲ್ ಬಳಿ ಸಾಗುತ್ತಿದ್ದಾಗ, ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರ್ ಆಟೋಗೆ ಗುದ್ದಿದೆ. ಈ ವೇಳೆ ಸಚ್ಚಿದಾನಂದ ಸ್ಥಳದಲ್ಲಿ ಸಾವನ್ನಪ್ಪಿದ್ದು, ಉಳಿದ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಎಂಡಬ್ಲ್ಯೂ ಕಾರ್ ಚಾಲಕನ ವಿರುದ್ಧ ಸಿಗ್ನಲ್ ಜಂಪ್ ಮತ್ತು ಆಟೋ ರಿಕ್ಷಾಗೆ ಗುದ್ದಿದ ಕಾರಣಕ್ಕೆ ಎಫ್ಐಆರ್ ದಾಖಲಿಸಲಾಗಿದೆ. ಆಟೋದಲ್ಲಿದ್ದ ಎಲ್ಲ ಐದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆ ವೇಳೆ ಡ್ರೈವರ್ ಪಾರಾಗಿದ್ದು, ಗಾಯಗೊಂಡಿಲ್ಲ. ಈ ಅಪಘಾತದ ಸಂಬಂಧ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಚ್ಚಿದಾನಂದ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಅವರ ಮೊಮ್ಮಗ ಯಸ್ರಾಜ್ (8) ಗಂಭೀರವಾಗಿ ಗಾಯಗೊಂಡಿದ್ದು, ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಎಂಡಬ್ಲ್ಯೂ ಕಾರ್ ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದ್ದು, ಶೀಘ್ರದಲ್ಲೇ ಪತ್ತೆ ಮಾಡಿ, ಚಾಲಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 281 (ವೇಗದ ಚಾಲನೆ) ಮತ್ತು 125 (ಎ) (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಗುಜರಾತ್: ರೈಲು ಹಳಿ ತಪ್ಪಿಸಲು ಮತ್ತೊಂದು ಸಂಚು, ತಪ್ಪಿದ ಅನಾಹುತ