ಕೊಚ್ಚಿ: ಕೇರಳದಲ್ಲಿ 'ಡ್ರೈ ಡೇ' ಅಬಕಾರಿ ನೀತಿಯನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳುವ ಮೂಲಕ ಅಬಕಾರಿ ಸಚಿವ ಎಂ.ಬಿ.ರಾಜೇಶ್ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ.ಮೊಹಮ್ಮದ್ ರಿಯಾಸ್ ಅವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೌನವನ್ನು ಪ್ರಶ್ನಿಸಿರುವ ವಿರೋಧ ಪಕ್ಷ ಕಾಂಗ್ರೆಸ್, ದೂರು ಬಂದರೂ ಆರೋಪಗಳ ಬಗ್ಗೆ ವಿಚಕ್ಷಣಾ ತನಿಖೆಗೆ ಏಕೆ ಆದೇಶಿಸಿಲ್ಲ ಎಂದು ಪ್ರಶ್ನಿಸಿದೆ.
ಅಬಕಾರಿ ನೀತಿ ಬದಲಾವಣೆ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಅಬಕಾರಿ ಸಚಿವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಕೇರಳ ರಾಜ್ಯ ಸರ್ಕಾರವು 'ಡ್ರೈ ಡೇ' ನಿಯಮವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸುತ್ತಿದೆ.
ಪ್ರತಿ ತಿಂಗಳ ಮೊದಲ ಕ್ಯಾಲೆಂಡರ್ ದಿನದಂದು ಕೇರಳ ರಾಜ್ಯಾದ್ಯಂತ ಶುಷ್ಕ ದಿನ ಅಥವಾ ಡ್ರೈ ಡೇ ಇರುತ್ತದೆ. ಅಂದರೆ ಈ ದಿನದಂದು ಮದ್ಯದಂಗಡಿಗಳು ಮತ್ತು ಬಾರ್ ಗಳು ಮುಚ್ಚಲ್ಪಟ್ಟಿರುತ್ತವೆ. ತಿಂಗಳ ಮೊದಲ ದಿನ ಸಂಬಳದ ದಿನವಾಗಿರುವುದರಿಂದ ಅಂದು ತಮ್ಮ ದುಡಿಮೆಯ ಹಣವನ್ನು ಜನತೆ ಮದ್ಯದ ಮೇಲೆ ಮೋಜಿಗಾಗಿ ಖರ್ಚು ಮಾಡದಂತೆ ಜಾಗೃತಗೊಳಿಸಲು ಡ್ರೈ ಡೇ ಕಡ್ಡಾಯ ಮಾಡಲಾಗಿದೆ.
ಬಾರ್ ಮಾಲೀಕರಿಂದ ಲಂಚ ಪಡೆದು ಅವರಿಗೆ ಅನುಕೂಲವಾಗುವಂತೆ ಎಲ್ಡಿಎಫ್ ಸರ್ಕಾರ ನಿಯಮ ರೂಪಿಸುತ್ತಿದೆ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪಿಸಿದೆ. ಆದರೆ ರಾಜ್ಯ ಸರ್ಕಾರದ ಮದ್ಯ ನೀತಿಯ ಬಗ್ಗೆ ಈವರೆಗೆ ಯಾವುದೇ ಯಾವುದೇ ಚರ್ಚೆ ನಡೆದಿಲ್ಲ ಎಂದು ಎಲ್ಡಿಎಫ್ ಹೇಳಿಕೊಂಡಿವೆ.