ಚಂಡೀಗಢ:ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗುತ್ತಿದ್ದಂತೆ, ಸಮೀಕ್ಷೆದಾರರು ತಮ್ಮ ಭವಿಷ್ಯವಾಣಿಗಳು ತಪ್ಪಾಗಿರುವುದನ್ನು ನೋಡಿ ಮತ್ತೊಮ್ಮೆ ಆಘಾತಕ್ಕೊಳಗಾಗಿದ್ದಾರೆ. ಶೇ 67.90 ರಷ್ಟು ಮತದಾನವಾಗಿದ್ದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಸಮೀಕ್ಷೆಗಳು ಉಲ್ಟಾ ಆಗಿವೆ. ಇದೇ ರೀತಿ ಹಿಂದಿನ ಕೆಲ ವರ್ಷಗಳಲ್ಲಿ ತಪ್ಪಾದ ಕೆಲ ಸಮೀಕ್ಷೆಗಳ ವಿವರ ಇಲ್ಲಿದೆ.
2024 ರ ಹರಿಯಾಣ ವಿಧಾನಸಭಾ ಚುನಾವಣೆ: ಹೆಚ್ಚಿನ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ ಫಲಿತಾಂಶಗಳು ಬಿಜೆಪಿ ಪರವಾಗಿದೆ.
ಲೋಕಸಭಾ ಚುನಾವಣೆ 2024:2024 ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಭರ್ಜರಿ ಗೆಲುವು ಸಾಧಿಸಲಿದೆ ಎಂದು ಕನಿಷ್ಠ 12 ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎನ್ಡಿಎ 361-401 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದರೆ, ನ್ಯೂಸ್ 24-ಟುಡೇಸ್ ಚಾಣಕ್ಯ ಎನ್ಡಿಎ 400 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತ್ತು. ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆಯು ಎನ್ಡಿಎಗೆ 353-383 ಸ್ಥಾನಗಳನ್ನು ನೀಡಿದರೆ, ರಿಪಬ್ಲಿಕ್ ಭಾರತ್-ಪಿ ಮಾರ್ಕ್ ಎನ್ಡಿಎ 359 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ ಅಂತಿಮವಾಗಿ ಬಿಜೆಪಿ ನೇತೃತ್ವದ ಎನ್ಡಿಎ ಕೇವಲ 293 ಸ್ಥಾನಗಳನ್ನು ಗಳಿಸಿತು. ವಾಸ್ತವವಾಗಿ, 2014 ಮತ್ತು 2019 ಕ್ಕಿಂತ ಭಿನ್ನವಾಗಿ, ಬಿಜೆಪಿ ತನ್ನದೇ ಆದ ಸರಳ ಬಹುಮತವನ್ನು ಗೆಲ್ಲಲು ಕೂಡ ವಿಫಲವಾಯಿತು ಮತ್ತು 2019 ರಲ್ಲಿ ಅದು ಹೊಂದಿದ್ದ 303 ಸ್ಥಾನಗಳ ಪೈಕಿ 63 ಸ್ಥಾನಗಳನ್ನು ಕಳೆದುಕೊಂಡು 240 ಸ್ಥಾನಗಳಿಗೆ ಸೀಮಿತವಾಯಿತು. ಇನ್ನು ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ಮೈತ್ರಿಕೂಟವು 235 ಸ್ಥಾನಗಳನ್ನು ಗೆದ್ದಿತ್ತು. ಈ ಮೂಲಕ ಬಹುತೇಕ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿದ್ದವು.
2023 ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ:ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಬಿಜೆಪಿ ಸಉಲಭವಾಗಿ ಗೆಲ್ಲಲಿದೆ ಎಂದು ಒಂಬತ್ತರಲ್ಲಿ ನಾಲ್ಕು ಸಮೀಕ್ಷೆಗಳು ಹೇಳಿದ್ದವು. ವಿಧಾನಸಭೆಯ 230 ಸ್ಥಾನಗಳ ಪೈಕಿ ಬಿಜೆಪಿ 139 ಸ್ಥಾನಗಳನ್ನು ಪಡೆಯಲಿದೆ ಎಂದು 3 ಸಮೀಕ್ಷೆಗಳು ಹೇಳಿದ್ದವು. ಬಿಜೆಪಿ ಈ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ.
2023 ರ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ:ಎಲ್ಲಾ ಎಂಟು ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದ್ದವು. ಆದರೆ ಬಿಜೆಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು.
ಪಶ್ಚಿಮ ಬಂಗಾಳ ಚುನಾವಣೆ- 2021:ಇಂಡಿಯಾ ಟುಡೇಯ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಬಿಜೆಪಿ 134-160 ಸ್ಥಾನ, ಟಿಎಂಸಿ 130-156 ಸ್ಥಾನ ಪಡೆಯಲಿವೆ ಎಂದು ಹೇಳಲಾಗಿತ್ತು. ರಿಪಬ್ಲಿಕ್-ಸಿಎನ್ಎಕ್ಸ್ ಸಮೀಕ್ಷೆಯು ಬಿಜೆಪಿ 138-148 ಸ್ಥಾನಗಳೊಂದಿಗೆ ಜಯಗಳಿಸಲಿದೆ ಮತ್ತು ಟಿಎಂಸಿ 128-138 ಸ್ಥಾನಗಳೊಂದಿಗೆ ಹಿನ್ನಡೆ ಅನುಭವಿಸಲಿದೆ ಎಂದು ಹೇಳಿತ್ತು. ಆದರೆ ನಿಜವಾದ ಫಲಿತಾಂಶಗಳು ಪ್ರಕಟವಾದಾಗ ಬಿಜೆಪಿ ಕೇವಲ 77 ಸ್ಥಾನಗಳಿಗೆ ಸೀಮಿತವಾಯಿತು ಮತ್ತು ಟಿಎಂಸಿ ಮತ್ತೆ ಅಧಿಕಾರಕ್ಕೆ ಬಂದಿತು.
2020 ರ ಬಿಹಾರ ವಿಧಾನಸಭಾ ಚುನಾವಣೆ: 2020 ರಲ್ಲಿ ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ ನೇತೃತ್ವದ ಮೈತ್ರಿಕೂಟ ಗೆಲ್ಲಲಿದೆ ಎಂದು ಅನೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಇದು ಸುಳ್ಳಾಯಿತು.
2019 ರ ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ: ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯ ಚುನಾವಣೆಗಳ ಸಮಯದಲ್ಲಿ, ಪ್ರಮುಖ ಸಮೀಕ್ಷೆ ಸಂಸ್ಥೆಗಳು ಮತ್ತು ಸುದ್ದಿ ಸಂಸ್ಥೆಗಳು ಬಿಜೆಪಿ ಮತ್ತು ಅದರ ಆಯಾ ಮಿತ್ರಪಕ್ಷಗಳು ದೊಡ್ಡ ಗೆಲುವು ಸಾಧಿಸಲಿವೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಅದು ಹಾಗಾಗಲಿಲ್ಲ. ಫಲಿತಾಂಶದ ನಂತರ ಎರಡೂ ರಾಜ್ಯಗಳಲ್ಲಿ ಸರ್ಕಾರ ರಚಿಸುವ ಹಗ್ಗಜಗ್ಗಾಟ ಮುಂದುವರಿಯಿತು.