ನವದೆಹಲಿ:ಸಂಸತ್ತಿನಲ್ಲಿ ಅಪರಿಚಿತರು ನುಸುಳಿ ಭದ್ರತಾ ಲೋಪ ಉಂಟಾಗುವುದನ್ನು ತಡೆಯಲು ದೆಹಲಿ ಪೊಲೀಸರು ಹೊಸ ಪ್ಲಾನ್ ಮಾಡಿದ್ದಾರೆ. ಸಂಸತ್ ಭವನದ ಹೊರಗೆ ಭದ್ರತೆಗೆ ಇರುವ ಸಿಬ್ಬಂದಿಗೆ 'ವಿಶೇಷ ಡ್ಯೂಟಿ ಕಾರ್ಡ್'ಗಳನ್ನು ವಿತರಿಸಲಾಗಿದೆ. ಅದರಲ್ಲಿ ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ವಿವರಿಸಲಾಗಿದೆ.
ಲೋಕಸಭೆ ಚುನಾವಣೆಗೂ ಮೊದಲು ನಡೆದ ಅಧಿವೇಶನದ ವೇಳೆ ಇಬ್ಬರು ಪ್ರತಿಭಟನಾಕಾರರು ಸಂಸತ್ನೊಳಕ್ಕೆ ನುಗ್ಗಿ ಕಲರ್ ಗ್ಯಾಸ್ ಸಿಡಿಸಿ, ಭಾರೀ ಆತಂಕ ಸೃಷ್ಟಿಸಿದ್ದರು. ಈ ಭದ್ರತಾ ಲೋಪ ದೆಹಲಿ ಪೊಲೀಸರ ಕಾರ್ಯನಿರ್ವಹಣೆಯ ಮೇಲೆ ಕಪ್ಪು ಮಸಿ ಬಳಿದಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಇಲಾಖೆ, ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆಯ ಮಾರ್ಗಸೂಚಿ ಕಾರ್ಡ್ ನೀಡಿದೆ.
ಕರ್ತವ್ಯ ನಿರ್ವಹಣೆಯ ಮಾರ್ಗಸೂಚಿಗಳು:ಸಂಸತ್ತಿನ ಸುತ್ತಲೂ ಭದ್ರತೆ ಕಾಪಾಡಲು ದೆಹಲಿ ಪೊಲೀಸರು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಹೊರಡಿಸಿದ್ದಾರೆ. ಆಯಕಟ್ಟಿನ ಸ್ಥಳಗಳಿಂದ ಒಳನುಸುಳುವಿಕೆ, ಪ್ರತಿಭಟನೆಗಳು ಸೇರಿದಂತೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿಬ್ಬಂದಿಯ ಪಾತ್ರಗಳನ್ನು ಡ್ಯೂಟಿ ಕಾರ್ಡ್ನಲ್ಲಿ ನಮೂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸತ್ತಿನ ಸುತ್ತಲೂ ನಿಯೋಜಿಸಲಾದ ದೆಹಲಿ ಪೊಲೀಸ್ ಸಿಬ್ಬಂದಿ ಈ ವಿಶೇಷ ಡ್ಯೂಟಿ ಕಾರ್ಡ್ ಅನ್ನು ತಮ್ಮ ಕುತ್ತಿಗೆಗೆ ಧರಿಸುತ್ತಾರೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾರ್ಗಸೂಚಿಗಳನ್ನು ಬರೆಯಲಾಗಿದೆ. ಸಂಸತ್ ಆವರಣದಲ್ಲಿ ವಾಹನಗಳ ನುಗ್ಗುವಿಕೆ ಪ್ರಯತ್ನ, ಪ್ರತಿಭಟನೆಗಳು, ಸಭೆಗಳು ಅಥವಾ ಯಾವುದೇ ಅನುಮಾನಾಸ್ಪದ ಚಟುವಟಿಕೆಯಂತಹ ವಿವಿಧ ಸನ್ನಿವೇಶಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ವಿವರಿಸಲಾಗಿದೆ ಎಂದರು.